ಸಂಸದ ಯದುವೀರ್/ ಸಿಎಂ ಸಿದ್ದರಾಮಯ್ಯ/ ಪ್ರತಾಪ್ ಸಿಂಹ (ಫೈಲ್ ಫೋಟೋ)
ಪ್ರಿನ್ಸಸ್ ಹೆಸರನ್ನು ಬದಲಾವಣೆ ಮಾಡಬಾರದು. ಈ ರಸ್ತೆಗೆ ಈಗಿರುವ ಹೆಸರು ಹಾಗೇ ಮುಂದುವರೆಯಬೇಕು ಮತ್ತು ರಸ್ತೆಗೆ ಹೆಸರಿಡುವ ನೋಟಿಫಿಕೇಷನ್ ಅನ್ನು ಹಿಂಪಡೆಯಬೇಕೆಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಬೆಂಗಳೂರು : ಮೈಸೂರಿನ ಪ್ರಿನ್ಸಸ್ (Princes) ರಸ್ತೆಗೆ ಸಿದ್ದರಾಮಯ್ಯ (Siddaramaiah) ಹೆಸರು ಮರು ನಾಮಕರಣ ಮಾಡುವ ವಿಚಾರವಾಗಿ ಒಂದು ವಾರದ ಹಿಂದೆ ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಅಪಾರವಾಗಿದೆ. ರಸ್ತೆಗೆ ಅವರ ಹೆಸರಿಟ್ಟರೆ ತಪ್ಪೇನು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Ex MP Pratap Simha) ಹೇಳಿದ್ದರು. ಅದಾದ ಬಳಿಕ ಬಿಜೆಪಿ ನಾಯಕರು (BJP Leader) ಸೇರಿದಂತೆ ಅನೇಕರು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಎಚ್ಚಿತ್ತುಕೊಂಡಿರುವ ಅವರು ಈ ವಿಚಾರದಲ್ಲಿ ಯೂಟರ್ನ್ ಹೊಡೆದಿದ್ದಾರೆ.
ಮುಡಾ ಇರುವವರೆಗೂ ಸಿದ್ದರಾಮಯ್ಯ ಹೆಸರು ಶಾಶ್ವತ
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಮುಡಾ ಇರುವವರೆಗೂ ಸಿಎಂ ಸಿದ್ದರಾಮಯ್ಯ ಮಾಡಿರುವ ಕೆಲಸ ಸ್ಥಿರ ಸ್ಥಾಯಿಯಾಗಿರುತ್ತದೆ, ಹೀಗಾಗಿ ಅವರ ಹೆಸರನ್ನು ಬೇರೆ ಎಲ್ಲೂ ಇಡುವ ಅವಶ್ಯಕತೆ ಇಲ್ಲ ಎಂದು ರಸ್ತೆಗೆ ಸಿದ್ದರಾಮಯ್ಯ ಹೆಸರು ನಾಮಕರಣ ಮಾಡುವ ವಿಚಾರವಾಗಿ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.
ಪ್ರಿನ್ಸಸ್ ರಸ್ತೆ ಎಂದು ಹೆಸರಿದೆ!
ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಸಂದರ್ಭಲ್ಲಿ ಮಾತನಾಡಿದ ಅವರು, ರಸ್ತೆಗೆ ಈಗಾಗಲೇ ಪ್ರಿನ್ಸಸ್ ರಸ್ತೆ ಎಂದು ಹೆಸರಿದೆ ಎಂದು ಸಂಸದರಾದ ಯದುವೀರ್ ಒಡೆಯರ್ ಅವರು ನಿನ್ನೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಪ್ರಿನ್ಸಸ್ ಹೆಸರನ್ನು ಬದಲಾವಣೆ ಮಾಡಬಾರದು. ಈ ರಸ್ತೆಗೆ ಈಗಿರುವ ಹೆಸರು ಹಾಗೇ ಮುಂದುವರೆಯಬೇಕು ಮತ್ತು ರಸ್ತೆಗೆ ಹೆಸರಿಡುವ ನೋಟಿಫಿಕೇಷನ್ ಅನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸಿದ್ದರಾಮಯ್ಯ ಹೆಸರು ಕೂಡ ಇದೆ
ನಿಮ್ಮ ಹೆಸರಿನಲ್ಲೇ ಮೈಸೂರಿನಲ್ಲಿ ವೃತ್ತ ಇದೆ. ಹಾಸ್ಟೆಲ್ ಒಂದಕ್ಕೆ ನಿಮ್ಮ ಹೆಸರನ್ನು ಇಡಲಾಗಿದೆ. ಈಗಾಗಲೇ ಹೆಸರಿರುವ ರಸ್ತೆಗೆ ನಿಮ್ಮ ಹೆಸರಿಡುವ ಅವಶ್ಯಕತೆ ಇಲ್ಲ. ಈ ವಿಚಾರವಾಗಿ ನಮಗೆ ಸಿಎಂ ಮನೆ ಬಾಗಿಲು ತಟ್ಟುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಕಾನೂನು ಪದವೀಧರರು, ಅವರಿಗೆ ಕಾನೂನಿನ ಅರಿವು ಇರಬೇಕು. ಮೈಸೂರಿನ ಹಿನ್ನೆಲೆಯೂ ಸಿದ್ದರಾಮಯ್ಯನವರಿಗೆ ಗೊತ್ತಿದೆ ಎಂದರು.
ಮಹಾರಾಜರ ಋಣದಲ್ಲಿ ನಾವೆಲ್ಲಾ ಇದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ವಿವಿಯಲ್ಲೇ ಸಿದ್ದರಾಮಯ್ಯ ಪದವಿ ಪಡೆದಿದ್ದು. ಅವರು ಕಟ್ಟಿಸಿದ ಡ್ಯಾಂ ನೀರನ್ನೇ ಸಿದ್ದರಾಮಯ್ಯ ಕುಡಿಯುತ್ತಿರುವುದು. ಅನ್ನ, ವಿದ್ಯೆ, ಕುಡಿಯುವ ನೀರಿನ ಋಣ ನಮ್ಮೆಲ್ಲರ ಮೇಲಿದೆ. ಪ್ರಜ್ಞಾವಂತರಾದವರು ಈ ವಿಚಾರದಲ್ಲಿ ವೈರತ್ವ, ದ್ವೇಷ ಮಾಡಬಾರದು ಎಂದು ಕುಟುಕಿದರು. ಮಾತ್ರವಲ್ಲ ಈ ಹಿಂದೆ ರಸ್ತೆಗೆ ಪ್ರಿನ್ಸೆಸ್ ಹೆಸರು ಇರುವ ಕುರಿತು ಮಾಹಿತಿ ಇರಲಿಲ್ಲ ಹಾಗಾಗಿ ಸಿದ್ದರಾಮಯ್ಯ ಹೆಸರಿಟ್ಟರೆ ಸಮಸ್ಯೆ ಇಲ್ಲ ಎಂದು ಹೇಳಿರುವುದಾಗಿ ಸ್ಪಷ್ಟನೆ ನೀಡಿದರು.

Post a Comment