ಸಾಂದರ್ಭಿಕ ಚಿತ್ರ
ಬಸ್ ಟಿಕೆಟ್ ದರ ಏರಿಕೆ ಕುರಿತು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯ: ನಿನ್ನೆ (ಜನವರಿ 2) ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಎಲ್ಲಾ ಸರ್ಕಾರಿ ಬಸ್ ಟಿಕೆಟ್ (Govt Bus Ticket Price) ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಜನರು ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕುರಿತು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆಕ್ರೋಶ ಹೊರಹಾಕಿದ್ದಾರೆ.
ಗ್ಯಾರೆಂಟಿ ಕಮಿಟ್ಮೆಂಟ್‌ನಿಂದ ಸಮಸ್ಯೆ
ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಕಮಿಟ್ಮೆಂಟಿನಿಂದ ಸರ್ಕಾರ ಸಮಸ್ಯೆ ಎದುರಿಸ್ತಿದೆ. ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟಿವೆ. ರಾಜ್ಯದ ಜನರ ತೆರಿಗೆ ಹಣ ಸರಿಯಾದ ರೀತಿ ಬಳಕೆ ಆಗದೆ ಇಂದು ಇಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್ ಶಾಸಕರು ಮಾತ್ರವಲ್ಲದೆ ಕಾಂಗ್ರೆಸ್ ಸರ್ಕಾರದ ಶಾಸಕರೇ ಬೇಸರ ವ್ಯಕ್ತಪಡಿಸ್ತಿದ್ದಾರೆ. ಗ್ಯಾರಂಟಿ ಯೋಜನೆ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ. ನಮ್ಮ ರಾಜ್ಯದಲ್ಲಿ ಹಣದ ಕೊರತೆ ಇಲ್ಲಾ ನಮ್ಮದು ಸಂಪತ್ಭರಿತ ರಾಜ್ಯ ಎಂದರು.
15 ರ ನಂತ್ರ ಹಲವು ವಿಚಾರ ಮಾತಾಡ್ತೀನಿ
ಕೊರತೆ ಇರೋದು ಸರ್ಕಾರದ ಆಡಳಿತದಲ್ಲಿ. ಅನೇಕ ವಿಚಾರಗಳಿವೆ, ಜನವರಿ 15ರ ನಂತರ ಅಂದ್ರೆ ಸಂಕ್ರಾಂತಿ ಹಬ್ಬ ಕಳೆದ ಬಳಿಕ ಈ ವಿಚಾರವಾಗಿ ಮಾತನಾಡ್ತಿನಿ. ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಇದೆಯಾ ಎಂಬ ಸ್ಥಿತಿ ನಿರ್ಮಣವಾಗಿದೆ. ಸಿಎಂ ಖಾಸ ಶಿಷ್ಯ ರಾಮಪ್ಪ ದಯಾ ಮರಣಕ್ಕೆ ಕೇಳಿಕೊಂಡಿದ್ದಾರೆ. ನಮ್ಮ ಸಂಪತ್ಬರಿತ ರಾಜ್ಯವನ್ನು ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ದೊಡ್ಡ ಮಟ್ಟದ ಸಾಧನೆ ಅಂತ ಜಾಹಿರಾತು ನೀಡ್ತಿದೆ ಈ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
ಜಾಹಿರಾತಿಗೆ ಕೋಟ್ಯಾಂತರ ಖರ್ಚು
ಜಾಹಿರಾತಿಗೆ ರಾಜ್ಯದ ಜನರ ಕೋಟ್ಯಾಂತರ ರೂಪಾಯಿ ಹೊಳೆ ರೀತಿ ಹರಿಸ್ತಿದ್ದಾರೆ. ಬಸ್ ದರ ಜಾಸ್ತಿ ಮಾಡಿದ್ದಾರೆ ಇದನ್ನು ಕೇಳಿದ್ರೆ ಸಿಎಂಗೆ ಉಸಿರೇ ಇಲ್ಲಾ. ಬೆವರು ಸುರಿಸಿ ಖಜಾನೆ ತುಂಬಿಸಿ, ಇವರು ನಿಮ್ಗೆ ಗ್ಯಾರಂಟಿ ಯೋಜನೆ ಕೊಡ್ತಿಲ್ಲ. ನಿಮ್ ಜೇಬಿಂದ ದರೋಡೆ ಮಾಡಿ ಕೊಡ್ತಿದ್ದಾರೆ. ಜನ ಅರ್ಥ ಮಾಡಿಕೊಳ್ಳಬೇಕು, ಡೀಸೆಲ್ ಸೆಸ್ ಏರಿಸಿದ್ದು ಇವ್ರು ಮೊದಲು ಇವ್ರು ಕಡಿಮೆ ಮಾಡಲಿ. ಗ್ಯಾರಂಟಿ ಯೋಜನೆಗಾಗಿ ಡೀಸೆಲ್ ದರ ಏರಿಸಿದ್ರಲ್ಲ ಅದನ್ನು ಸರಿ ಮಾಡಲಿ ಎಂದರು.
ಕೆಪಿಎಸ್‌ಸಿ ಮೇಲೆ ಕಿಡಿಕಾರಿದ ಹೆಚ್‌ಡಿಕೆ
ಕೆಪಿಎಸ್‌ಸಿ ಎಡವಟ್ಟು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದೊಂದು ಕೆಪಿಎಸ್‌ಸಿ ಸಂಸ್ಥೆ ಅಂತ ಕರಿತೀರಾ?. 15 ಜನರನ್ಮ ಮೆಂಬರ್ ಮಾಡಿಕೊಂಡಿದ್ದಾರೆ. ಒಂದು ಅಪಾಂಟ್ಮೆಂಟ್ ಕೊಡಲು ಆಗಲಿಲ್ಲಾ. ನೆಟ್ಟಗೆ ಒಂದು ಪರೀಕ್ಷೆ ನಡೆಸಲು ಆಗಲಿಲ್ಲ. ಸರ್ಕಾರಕ್ಕೆ ಉದ್ಯೋಗ ಕೊಡಲು ಆಗದೆ ಸುಮ್ಮನೆ ಸಬೂಬು ಹೇಳ್ತಿದ್ದಾರೆ ಎಂದು ಕಿಡಿಕಾರಿದರು.

Post a Comment