ಬಸ್ ಟಿಕೆಟ್ ದರ ಏರಿಕೆ: ಸಾರಿಗೆ ಸಚಿವರು ಹೇಳಿದ್ದೇನು?
ಶಕ್ತಿ ಯೋಜನೆ ಹೆಸರಲ್ಲಿ ಮಹಿಳೆಯರಿಗೆ ಫ್ರೀ ಬಸ್ ಸಂಚಾರಕ್ಕೆ ಅವಕಾಶ ಕೊಟ್ಟಿರುವ ರಾಜ್ಯ ಸರ್ಕಾರ, ಇದೀಗ ಬಸ್ ದರ ಟಿಕೆಟ್ ಏರಿಕೆಗೆ ಮುಂದಾಗಿದ್ದು, ಪುರುಷರಿಗೆ ಶಾಕ್ ಕೊಟ್ಟಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಸ್ ಟಿಕೆಟ್ ದರ ಏರಿಕೆಯಿಂದ ಪುರುಷರಿಗೂ ಸ್ವಲ್ಪ ದಿನಗಳು ಬೇಜಾರ್ ಆಗುತ್ತದೆ, ಆ ಮೇಲೆ ಅವ್ರು ಸರಿ ಹೋಗ್ತಾರೆ ಅಂತ ಹೇಳಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆ (Shakti Scheme) ಹೆಸರಲ್ಲಿ ಮಹಿಳೆಯರಿಗೆ ಫ್ರೀ ಬಸ್ (Free Bus) ಸಂಚಾರಕ್ಕೆ ಅವಕಾಶ ಕೊಟ್ಟಿರುವ ರಾಜ್ಯ ಸರ್ಕಾರ, ಇದೀಗ ಬಸ್ ದರ ಟಿಕೆಟ್ ಏರಿಕೆಗೆ (bus ticket hike) ಮುಂದಾಗಿದ್ದು, ಪುರುಷರಿಗೆ ಶಾಕ್ ಕೊಟ್ಟಿದೆ. ಇದರ ವಿರುದ್ಧ ಸಾರ್ವಜನಿಕವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದೆಡೆ ರಾಜ್ಯ ಸರ್ಕಾರದ (state government) ವಿರುದ್ಧ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರಿಗೆ ಗುಲಾಬಿ ಹೂ ಕೊಟ್ಟು ಬಿಜೆಪಿ ಪ್ರತಿಭಟನೆ (BJP Protest) ಮಾಡಿದೆ. ಇದರ ನಡುವೆ ಸಾರಿಗೆ ಸಚಿವ (Transport Minister) ರಾಮಲಿಂಗಾರೆಡ್ಡಿ (Ramalinga Reddy) ಸುದ್ದಿಗೋಷ್ಠಿ ನಡೆಸಿದ್ದಾರೆ. ಬಸ್ ಟಿಕೆಟ್ ದರ ಏರಿಕೆಯಿಂದ ಪುರುಷರಿಗೂ ಸ್ವಲ್ಪ ದಿನಗಳು ಬೇಜಾರ್ ಆಗುತ್ತದೆ, ಆ ಮೇಲೆ ಅವ್ರು ಸರಿ ಹೋಗ್ತಾರೆ ಅಂತ ಹೇಳಿದ್ದಾರೆ. ಬಿಜೆಪಿಯವರು ಮಹಿಳಾ ವಿರೋಧಿಗಳು
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ವಿರೋಧ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸುದ್ದಿಗೋಷ್ಠಿ ನಡೆಸಿದ್ರು. ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಗರು ಮನುವಾದಿಗಳು, ಮಹಿಳಾ ವಿರೋಧಿಗಳು ಎಂದ್ರು. ಇವ್ರಿಗೆ ಶಕ್ತಿ ಯೋಜನೆಯನ್ನು ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಹೀಗಾಗಿ ವ್ಯಾಪಕವಾಗಿ ಬಿಜೆಪಿಯವರು ಅಪ ಪ್ರಚಾರ ಮಾಡಿಕೊಂಡೇ ಬರುತ್ತಿದ್ದಾರೆ ಅಂತ ಕಿಡಿಕಾರಿದ್ರು
ಅಂದು ದರ ಏರಿಕೆ ವೇಳೆ ಅಶೋಕ್ ಸಚಿವರಾಗಿದ್ರು
ನಾಲ್ಕು ನಿಗಮಗಳು ಕೂಡ ಆರೇಳು ತಿಂಗಳಿಂದ ದರ ಪರಿಷ್ಕರಣೆ ಮಾಡಬೇಕು ಅಂತಾ ಹೇಳ್ತಿದ್ರು. ಅವರು ಪ್ರಸ್ತಾವನೆ ಕಳುಹಿಸಿದ್ರು. 2014ರಲ್ಲಿ ಟಿಕೆಟ್ ದರ ಏರಿಕೆ ಮಾಡಿದ್ವಿ, ಡೀಸೆಲ್ ಕಡಿಮೆ ಆದಾಗ ದರ ಇಳಿಕೆ ಮಾಡಿದ್ವಿ. ಹತ್ತು ವರ್ಷಗಳಿಂದ ದರ ಪರಿಷ್ಕರಣೆ ಮಾಡಿರಲಿಲ್ಲ ಅಂತ ಸಚಿವರು ಸಮರ್ಥನೆ ನೀಡಿದ್ರು. 2020ರಲ್ಲಿ ವಾಯುವ್ಯ, ಕಲ್ಯಾಣ ಕರ್ನಾಟಕ ಹಾಗೂ ಕೆಎಸ್‌ಆರ್‌ಟಿಸಿಯವರು ಶೇಕಡಾ 15ರಷ್ಟು ಏರಿಕೆ ಮಾಡಿದ್ರು. ಅವಾಗ ಯಡಿಯೂರಪ್ಪ ಸಿಎಂ ಆಗಿದ್ರು, ಇವತ್ತು ಮೆಜೆಸ್ಟಿಕ್ ನಲ್ಲಿ ಪ್ರತಿಭಟನೆ ಮಾಡಿದವರೇ ಸಾರಿಗೆ ಮಂತ್ರಿಗಳು ಆಗಿದ್ರು ಅಂತ ಅಶೋಕ್‌ಗೆ ಕುಟುಕಿದ್ರು.
ಸಾಲ ಇದ್ದಿದ್ರಿಂದ ದರ ಏರಿಕೆ ಮಾಡಬೇಕಾಯ್ತು
ನಾನು ಅಧಿಕಾರ ವಹಿಸಿಕೊಂಡಾಗ ಇವರು 5900 ಕೋಟಿ ಸಾಲ ಇಟ್ಟು ಹೋಗಿದ್ರು. 13 ಕೋಟಿ 71 ಲಕ್ಷ ನಾನು ಗೃಹ ಸಚಿವನಾಗಿದ್ದಾಗ ಇತ್ತು. ಈವಾಗ ಇಷ್ಟು ಸಾಲ ಇರೋದ್ರಿಂದ ದರ ಹೆಚ್ಚಳ ಮಾಡಬೇಕಾಯಿತು ಅಂತ ಹಿಂದಿನ ಬಿಜೆಪಿ ಸರ್ಕಾರದತ್ತ ಬೊಟ್ಟು ಮಾಡಿದ್ರು.
ದರ ಏರಿಕೆಗೆ ಸಾರಿಗೆ ಸಚಿವರ ಸಮರ್ಥನೆ
2020ರಲ್ಲಿ ಬಿಜೆಪಿ ಸರ್ಕಾರ ಇತ್ತು. ಆವಾಗ ಶೇಕಡಾ 12ರಷ್ಟು ದರ ಏರಿಕೆ ಮಾಡಿದ್ರು. ಬಿಜೆಪಿಯವರಿಗೆ ಆದಾಯ ಯಾವುದು? ಲಾಭ ಯಾವುದು ಅಂತಾನೂ ಗೊತ್ತಿಲ್ಲ, ಆದಾಯ-ಲಾಭದ ಬಗ್ಗೆ ವ್ಯತ್ಯಾಸ ತಿಳಿಯದವರು ಬಿಜೆಪಿಗರು ಅಂತ ವ್ಯಂಗ್ಯವಾಡಿದ್ರು. 5900 ಕೋಟಿ ಸಾಲ ಇಲ್ಲ ಅಂದಿದ್ರೆ ಬಸ್ ದರ ಏರಿಕೆ ಮಾಡ್ತಾನೇ ಇರಲಿಲ್ಲ ಅಂತ ಮತ್ತೆ ಸಮರ್ಥನೆ ನೀಡಿದ್ರು.
ಡೀಸೆಲ್ ದರ, ಸಿಬ್ಬಂದಿ ವೆಚ್ಚ ಹೆಚ್ಚಾಗಿದೆ
ಅಶೋಕ್ ಮಂತ್ರಿ ಆದಮೇಲೆ ನಾನು ಮಂತ್ರಿ ಆಗಿದ್ದೆ. 18ರಿಂದ 20ರವರೆಗೆ ಏಕೆ ಸಾಲ ಇಟ್ಟು ಹೋದ್ರು? ಇಂಧನ ದರ, ಉಪಕರಣ ದರ ಈಗಿನಷ್ಟು ಇರಲಿಲ್ಲ. 2022ರಲ್ಲಿ ಕೆಎಸ್‌ಆರ್‌ಟಿಸಿ ಅವರು ಶೇಕಡಾ 12ರಷ್ಟು ದರ ಹೆಚ್ಚಳ ಮಾಡಿದ್ರು. ಡಿಸೆಲ್ ದರ ಆಗ9.16 ಕೋಟಿ ಖರ್ಚಾಗುತ್ತಿತ್ತು. ಈಗ ಪ್ರತಿದಿನ 13.21 ಕೋಟಿ ಡೀಸೆಲ್ ದರ ವೆಚ್ಚವಿದೆ. ಡೀಸೆಲ್್ಗೆ ಪ್ರತಿದಿನ 4.05 ಕೋಟಿ ಖರ್ಚು ಹೆಚ್ಚಾಗಿದೆ. ಅಲ್ಲದೇ ಸಿಬ್ಬಂದಿ ವೆಚ್ಚ ಪ್ರತಿದಿನ 5.51 ಕೋಟಿ ಹೆಚ್ಚಳವಾಗಿದೆ. ಪ್ರತಿದಿನ ಒಟ್ಟೂ 9.56 ಕೋಟಿ ವೆಚ್ಚ ಹೆಚ್ಚಾಗಿದೆ. ಸಂಬಳಕ್ಕೆ 9.45 ಕೋಟಿಗೂ ಬೇಕು ಅಂತ ವಿವರಣೆ ನೀಡಿದ್ರು.
ಶಕ್ತಿ ಯೋಜನೆಗೆ ಸರ್ಕಾರ 8800 ಕೋಟಿ ಕೊಟ್ಟಿದೆ
ಸರ್ಕಾರ ನಮಗೆ 8800 ಕೋಟಿ ರೂಪಾಯಿ ನಮಗೆ ಶಕ್ತಿ ಯೋಜನೆಯಡಿ ಕೊಟ್ಟಿದೆ. ಈ 8800 ಕೋಟಿ ಹಣವನ್ನು ನಾಲ್ಕು ನಿಗಮಗಳಿಗೆ ಶಕ್ತಿ ಯೋಜನೆಗೆ ಕೊಟ್ಟಿದ್ದೇವೆ ಅಂತಲೂ ಸಾರಿಗೆ ಸಚಿವರು ಸಮರ್ಥನೆ ನೀಡಿದ್ದಾರೆ. ಜನವರಿ 15ರ ನಂತರ ಯೂನಿಯನ್ ಲೀಡರ್‌ಗಳನ್ನು ಕರೆಯುತ್ತೇವೆ. ಸಿಎಂ ಜೊತೆ ಚರ್ಚೆ ಮಾಡಿ ವೇತನ ಪರಿಷ್ಕರಣೆ ಬಗ್ಗೆ ನಿರ್ಧಾರ ಮಾಡುತ್ತೇವೆ ಅಂತ ರಾಮಲಿಂಗಾರೆಡ್ಡಿ ಹೇಳಿದ್ರು. ಇನ್ನು ಖಾಸಗಿ ಬಸ್ಸುಗಳು ಕೂಡ ದರ ಏರಿಕೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖಾಸಗಿ ಬಸ್‌ನವರು ಪ್ರಸ್ತಾವನೆ ಕೊಡಲಿ, ಆ ನಂತರ ಅದರ ಬಗ್ಗೆ ನೋಡೋಣ ಅಂತ ಹೇಳಿದ್ರು.

Post a Comment