ಮುಸ್ಲಿಂ ಮಹಿಳೆಯರ ಪರ ನಿಂತ Supreme Court​; ವಿಚ್ಛೇದಿತೆಯರಿಗಾಗಿ ಐತಿಹಾಸಿಕ ತೀರ್ಪು


 ಸ್ಲಿಂ ಮಹಿಳೆಯರಿಗೆ ಶಾಪವಾಗಿದ್ದ ತ್ರಿವಳಿ ತಲಾಖ್ ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿ, ಅದನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದದ್ದು ಹಳೆಯ ವಿಷಯವಾಯಿತು. ಇದೀಗ ಮತ್ತೊಂದು ಐತಿಹಾಸಿಕ ತೀರ್ಪು ಮುಸ್ಲಿಂ ಮಹಿಳೆಯರ ಪರವಾಗಿ ಬಂದಿದೆ. ಅದೇನೆಂದರೆ, ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ವಿವಾಹದ ಸಮಯದಲ್ಲಿ ತನ್ನ ತಂದೆಯಿಂದ ಪಡೆದ ನಗದು ಮತ್ತು ಚಿನ್ನದ ಆಭರಣಗಳನ್ನು ಮರುಪಡೆಯಲು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಅರ್ಹತೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆಯ ವ್ಯಾಪ್ತಿ ವಿಶಾಲವಾಗಿದೆ. ಇದು ವಿಚ್ಛೇದನದ ನಂತರ ಮುಸ್ಲಿಂ ಮಹಿಳೆಯ ಘನತೆ ಮತ್ತು ಆರ್ಥಿಕ ರಕ್ಷಣೆಯನ್ನು ಭದ್ರಪಡಿಸುವ ಬಗ್ಗೆ ಕಾಳಜಿ ವಹಿಸುತ್ತದೆ, ಇದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮಹಿಳೆಯರ ಹಕ್ಕುಗಳಿಗೆ ಹೊಂದಿಕೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಕೆಲವು ಸಮುದಾಯಗಳಲ್ಲಿ ಇಂದಿಗೂ ಪಿತೃಪ್ರಭುತ್ವವೇ ಮುಖ್ಯವಾಗಿರುವುದು ನೋವಿನ ಸಂಗತಿ ಎಂದಿರುವ ಸುಪ್ರೀಂಕೊರ್ಟ್​, ಮುಸ್ಲಿಮ್​ ಮಹಿಳೆಯರಿಗಾಗಿ ಇರುವ ಕಾಯ್ದೆಯ ರಚನೆಯು ಸಮಾನತೆ, ಘನತೆ ಮತ್ತು ಸ್ವಾಯತ್ತತೆಯನ್ನು ಮುಂಚೂಣಿಯಲ್ಲಿಡಬೇಕು. ವಿಶೇಷವಾಗಿ ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಅಂತರ್ಗತವಾಗಿ ಇರುವ ಪಿತೃಪ್ರಭುತ್ವದ ತಾರತಮ್ಯವು ಹೋಗಲಾಡಿಸುವ ಅಗತ್ಯವಿದೆ ಎಂದಿದ್ದಾರೆ.


ಏನೀ ಪ್ರಕರಣ?


ಪ್ರಸ್ತುತ ಪ್ರಕರಣದಲ್ಲಿ, ದಂಪತಿ ಆಗಸ್ಟ್ 28, 2005 ರಂದು ವಿವಾಹವಾದರು ಮತ್ತು ಡಿಸೆಂಬರ್ 13, 2011 ರಂದು ವಿಚ್ಛೇದನ ಪಡೆದರು. ನಂತರ, ಬೇಗಂ ವರದಕ್ಷಿಣೆ ಮೊತ್ತ, ಚಿನ್ನಾಭರಣಗಳು ಮತ್ತು ಇತರ ಸರಕುಗಳನ್ನು ಒಳಗೊಂಡ 17,67,980 ರೂ.ಗಳನ್ನು ಹಿಂದಿರುಗಿಸುವಂತೆ ಕೋರಿ ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ರ ಸೆಕ್ಷನ್ 3 ರ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದರು. ಈ ಕೇಸ್​ ಬಳಿಕ ಕಲ್ಕತ್ತಾ ಹೈಕೋರ್ಟ್‌ಗೆ ತಲುಪಿತು. ಆದರೆ ಹೈಕೋರ್ಟ್​ ಮಹಿಳೆಯ ವಿರುದ್ಧ ತೀರ್ಪು ನೀಡಿತು.


ಸುಪ್ರೀಂಕೋರ್ಟ್​ಗೆ ಮೇಲ್ಮನವಿ


ಖಾಜಿ (ಮದುವೆ ನೋಂದಣಿದಾರ) ಹೇಳಿಕೆ ಮತ್ತು ಮಹಿಳೆಯ ತಂದೆಯ ಹೇಳಿಕೆಯ ನಡುವಿನ ವಿರೋಧಾಭಾಸವನ್ನು ಹೈಕೋರ್ಟ್ ಗಮನಿಸಿ ಈ ತೀರ್ಪು ನೀಡಿತು. ಗಂಡನಿಗೆ ನೀಡಲಾದ ಮೊತ್ತ ಮತ್ತು ಚಿನ್ನವನ್ನು ದಾಖಲಿಸುವಲ್ಲಿ ತಪ್ಪು ನಮೂದಾಗಿರುವ ಹಿನ್ನೆಲೆಯಲ್ಲಿ ಮಹಿಳೆಯ ಪರ ತೀರ್ಪು ನೀಡುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿತು. ಇದರ ವಿರುದ್ಧ ಬೇಗಂ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಇದೀಗ ಸುಪ್ರೀಂಕೋರ್ಟ್​ ವಾದ-ಪ್ರತಿವಾದ ಆಲಿಸಿದ ಬಳಿಕ ಮಹಿಳೆಯ ಪರ ತೀರ್ಪು ನೀಡಿದೆ. ಜೊತೆಗೆ, ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ವಿವಾಹದ ಸಮಯದಲ್ಲಿ ತನ್ನ ತಂದೆಯಿಂದ ಪಡೆದ ನಗದು ಮತ್ತು ಚಿನ್ನದ ಆಭರಣಗಳನ್ನು ಮರುಪಡೆಯಲು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಅರ್ಹತೆ ಇದೆ ಎಂದು ಹೇಳಿದೆ.

Post a Comment

Previous Post Next Post