ಗಳೂರು: ಜೆಪಿ ನಗರದಲ್ಲಿ ನಡೆದಿರುವ ಈ ಪ್ರಕರಣ ನಿಜಕ್ಕೂ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆಶಾ ಜಾಧವ್ ಎಂಬ 58 ವರ್ಷದ ಮಹಿಳೆ, ಪತಿಯನ್ನು ಕಳೆದುಕೊಂಡು ಮಕ್ಕಳಿಲ್ಲದೆ ಬದುಕುತ್ತಿದ್ದಳು. 15 ವರ್ಷಗಳಿಂದ ಆಕೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳಳನ್ನ ಆಶಾ ತಮ್ಮ ಮಗಳಂತೆ ನೋಡಿಕೊಂಡಿದ್ದರು.
ವಯೋವೃದ್ಧ ಆಶಾ ತಮ್ಮ ಆಸ್ತಿಯನ್ನು ಮಂಗಳ ಹೆಸರಿಗೆ ವಿಲ್ ಮಾಡಿದ್ದಷ್ಟೇ ಅಲ್ಲ, ಆಕೆಯ ಸಾಲ ತೀರಿಸಿ, ಮದುವೆ ಪ್ಲಾನ್ ಕೂಡ ಮಾಡಿದ್ದರು.
ಆದರೆ ಆನ್‌ಲೈನ್ ಬೆಟ್ಟಿಂಗ್ ಹುಚ್ಚು ಮಂಗಳಳ ಜೀವನವನ್ನು ಹಾಳು ಮಾಡಿತು. ಪಾರ್ಟಿ, ಪಬ್ ಹಾಗೂ ಬಾಯ್‌ಫ್ರೆಂಡ್‌ಗಳ ಸುತ್ತಾಟದಿಂದಾಗಿ ಸಾಲದ ಬಿಕ್ಕಟ್ಟಿಗೆ ಸಿಲುಕಿದ ಮಂಗಳ, ಆಶಾ ಜಾಧವ್ ಅವರ ಮನೆಯಿಂದಲೇ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ಕದ್ದಿದ್ದಳು. ಒರಿಜಿನಲ್ ಕೀ ಬಳಸಿ ಬೀರುವಿನಲ್ಲಿದ್ದ ಚಿನ್ನವನ್ನು ಕದ್ದು, ಕೀ ಅನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು.
ದೀಪಾವಳಿ ಸಂದರ್ಭದಲ್ಲಿ ಆಶಾ ಬೀರು ತೆರೆಯಿಸಿದಾಗ ಕಳ್ಳತನ ಬೆಳಕಿಗೆ ಬಂತು. ಆರಂಭದಲ್ಲಿ ಆಶಾ ಮಂಗಳಳ ಮೇಲೆ ನಂಬಿಕೆಯಿಟ್ಟು ದೂರು ನೀಡಿದರೂ ಆಕೆಯ ಮೇಲೆ ಅನುಮಾನ ಇರಲಿಲ್ಲ. ಆದರೆ ಜೆಪಿ ನಗರ ಪೊಲೀಸರು ಸಿಡಿಆರ್ ಪರಿಶೀಲನೆ ನಡೆಸಿ ಮಂಗಳ ಅಡಮಾನ ಇಟ್ಟಿದ್ದ ಮೆಸೇಜ್ ಪತ್ತೆಹಚ್ಚಿದರು. ವಿಚಾರಣೆ ವೇಳೆ ಮಂಗಳ ಕೃತ್ಯ ಒಪ್ಪಿಕೊಂಡಳು.
ಆಶಾ ಜಾಧವ್ ಪೊಲೀಸರ ಮುಂದೆ "ಚಿನ್ನ ಸಿಕ್ಕಿದೆ ಅಲ್ವಾ, ಅವಳ ಪಾಡಿಗೆ ಬಿಟ್ಟುಬಿಡಿ" ಎಂದು ವಿನಂತಿಸಿದರೂ, ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಂಡರು. 450 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿ ವಶಪಡಿಸಿಕೊಂಡು ಮಂಗಳಳನ್ನು ಬಂಧಿಸಿದರು.
ಸದ್ಯ ಮಂಗಳ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು, ಆಶಾ ಜಾಧವ್ ಮಂಗಳ ಹೆಸರಿಗೆ ಬರೆದಿದ್ದ ವಿಲ್ ವಾಪಸ್ಸು ಪಡೆದಿದ್ದಾರೆ. ಒಮ್ಮೆ ಮಗಳಂತೆ ನೋಡಿದ ಮಂಗಳ ಇದೀಗ ನಂಬಿಕೆಯನ್ನೇ ಕಳೆದುಕೊಂಡು ಬಂಧನಕ್ಕೊಳಗಾದ ಘಟನೆ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Post a Comment