Important Bills: ಇದೇ ವರ್ಷ ವಕ್ಫ್ ಬೋರ್ಡ್‌ ಪರಮಾಧಿಕಾರಕ್ಕೆ ಅಂಕುಶ! 2025ರಲ್ಲಿ ಅಂಗೀಕಾರ ಗೊಳ್ಳುತ್ತವಾ ಈ ಬಿಲ್​ಗಳು?


 ವಕ್ಫ್ ಬೋರ್ಡ್‌
2024ರಲ್ಲಿ ಅನೇಕ ಮಸೂದೆಗಳನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದು ಅವುಗಳ ಅಂಗೀಕಾರ ಇನ್ನೂ ಸಾಧ್ಯವಾಗಿಲ್ಲ. ಪ್ರಮುಖ ಬಿಲ್​ಗಳಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಜಂಟಿ ಸದನ ಸಮಿತಿ ಪರಿಶೀಲನೆಗೆ ಕಳುಹಿಸಲಾಗಿದೆ. ಇನ್ನು ಈ ಪ್ರಮುಖ ಮಸೂದೆಗಳು 2025ರಲ್ಲಿ ಅಂಗೀಕಾರ ಗೊಳ್ಳುತ್ತವಾ? ಇದಕ್ಕೆ ಕೇಂದ್ರ ಸರ್ಕಾರದ ಪ್ಲ್ಯಾನ್ ಏನು? ಎಂಬುದು ಹಲವರ ಪ್ರಶ್ನೆಯಾಗಿದೆ.
ನವದೆಹಲಿ: ದೇಶದಲ್ಲಿ ಹಲವು ಪ್ರಮುಖ ಬದಲಾವಣೆಗೆ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದ್ದು ಇದರಲ್ಲಿ ಒಂದು ದೇಶ ಒಂದು ಚುನಾವಣೆ (One Nation One Election) ಮತ್ತು ವಕ್ಫ್ ಕಾಯ್ದೆ (Waqf Act) ತಿದ್ದುಪಡಿ ಸಾಕಷ್ಟು ಚರ್ಚೆಯಾದ ವಿಚಾರಗಳು. ರಾಷ್ಟ್ರಲ್ಲಿ ಏಕಕಾಲದಲ್ಲೇ ಲೋಕಸಭೆ (Lok Sabha) ಮತ್ತು ರಾಜ್ಯಗಳ ವಿಧಾನಸಭೆ (Assembly) ಚುನಾವಣೆಯನ್ನು ನಡೆಸುವ ಉದ್ದೇಶಿಂದ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಇನ್ನು ವಕ್ಫ್ ಕಾಯ್ದೆಯಲ್ಲಿನ ಪ್ರಮುಖ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ವಕ್ಫ್​ ಕಾಯ್ದೆಯಲ್ಲಿ ಯಾವುದಕ್ಕೆಲ್ಲ ತಿದ್ದುಪಡಿ?

ಭೂಮಿಯ ಹಕ್ಕು ಪಡೆಯಲು ವಕ್ಫ್ ಮಂಡಳಿಗಳ ಅಧಿಕಾರವನ್ನು ಸೀಮಿತಗೊಳಿಸುವುದು, ಮಂಡಳಿಯ ಸಂಯೋಜನೆಗಳನ್ನು ಪುನರ್ರಚಿಸುವುದು ಮತ್ತು ಸರಿಯಾದ ಪರಿಶೀಲನಾ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳುವುದು ಸೇರಿ ಕಾಯಿದೆಗೆ ಸಂಬಂಧಿಸಿದಂತೆ ಬರೋಬ್ಬರಿ 40 ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ವಿವಾದಿತ ಭೂಮಿ ಹಕ್ಕುಗಳಂತಹ ಸಮಸ್ಯೆಗಳನ್ನು ಪರಿಹರಿಸುವುದು, ವಕ್ಫ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಒದಗಿಸುವುದು, ವಕ್ಫ್ ಆಸ್ತಿಗಳ ದುರ್ಬಳಕೆ ತಡೆಯೋದು ಕೇಂದ್ರ ಸರ್ಕಾರದ ಹೊಸ ಕಾನೂನಿನ ಉದ್ದೇಶವಾಗಿದೆ.
ಜೆಪಿಸಿ ಕಮಿಟಿಗೆ ವಕ್ಫ್ ತಿದ್ದುಪಡಿ ಕಾಯ್ದೆ

ಮಂಡನೆ ಮಾಡಲು ಉದ್ದೇಶಿಸಲಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮುಂದೂಡಿದ್ದು, ಇದನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಿದೆ. ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು, ಇತ್ಯರ್ಥವಾಗದ ಸಮಸ್ಯೆಗಳನ್ನು ಪರಿಹರಿಸಲು ತನ್ನ ಅಧಿಕಾರಾವಧಿಯನ್ನು ವಿಸ್ತರಿಸುವ ಅಗತ್ಯವನ್ನು ಸಮಿತಿಯು ಸರ್ವಾನುಮತದಿಂದ ಒಪ್ಪಿಕೊಂಡಿದೆ ಎಂದು ತಿಳಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡಿದ್ದ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುಯತ್ತದೆ ಎನ್ನಲಾಗಿತ್ತು. ಆದರೆ ಜೆಪಿಸಿ ಕಮಿಟಿ ಅಧಿಕಾರಾವಧಿ ವಿಸ್ತರಿಸಿದ್ದು, ಮುಂಬರುವ ಬೇಸಿಗೆ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.: ಒಂದು ರಾಷ್ಟ್ರ ಒಂದು ಚುನಾವಣೆ’

ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024’ ಅನ್ನು ಲೊಕಸಭೆಯಲ್ಲಿ ಮಂಡಿಸಿತ್ತು. ಇತ್ತೀಚೆಗೆ, ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯು “ಒಂದು ರಾಷ್ಟ್ರ, ಒಂದು ಚುನಾವಣೆ” ಪ್ರತಿಪಾದಿಸುವ ಸರ್ಕಾರದ ಪ್ರಸ್ತಾಪದ ಕುರಿತು ವರದಿಯನ್ನು ಕಳುಹಿಸಿದೆ. ಪ್ರಸ್ತಾವನೆಯು ದೇಶದಲ್ಲಿ ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಪ್ರತಿಪಾದಿಸುತ್ತದೆ.
ಒನ್ ನೇಷನ್, ಒನ್ ಎಲೆಕ್ಷನ್ ಪ್ರಸ್ತಾವನೆ ಏನು?

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಂದೇ ದಿನದಲ್ಲಿ ಅಥವಾ ನಿರ್ದಿಷ್ಟ ಕಾಲಮಿತಿಯೊಳಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಇದು ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸುವುದು, ಚುನಾವಣೆಗಳ ಆವರ್ತನವನ್ನು ಕಡಿಮೆ ಮಾಡುವುದು ಮತ್ತು ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುವ ಗುರಿಯನ್ನು ಹೊಂದಿದೆ.
ವಿರೋಧ ಪಕ್ಷಗಳು ಒನ್ ನೇಷನ್, ಒನ್ ಎಲೆಕ್ಷನ್ ಪ್ರಸ್ತಾವನೆಯನ್ನು ತೀವ್ರವಾಗಿ ಕಂಡಿಸಿದ್ದು, ಇದರ ಅಗತ್ಯತೆ ಪ್ರಶ್ನಿಸಿವೆ. ಸದ್ಯ ಪ್ರಸ್ತಾಪಿಸ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಕಳುಹಿಸಲಾಗಿದೆ. ಸಮಿತಿಯಲ್ಲಿ ವಿಸ್ತೃತ ಚರ್ಚೆಯಾಗಿ, ಅಗತ್ಯ ಮಾರ್ಪಾಡುಗಳ ಬಳಿಕ ಮತ್ತೊಂದು ಬಾರಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಮಂಡನೆ ಮಾಡಲಾಗುತ್ತದೆ. ಇನ್ನು 2025ರಲ್ಲೇ ಈ ಮಸೂದೆಯನ್ನು ಮಂಡನೆ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿದೆ ಎನ್ನಲಾಗಿದ್ದು, ಆಗ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯ ಭವಿಷ್ಯ ಏನೆಂಬುದು ನಿರ್ಧಾರವಾಗಲಿದೆ.

Post a Comment

Previous Post Next Post