2024ರಲ್ಲಿ ಜಗತ್ತಿನಲ್ಲಿ ಅನೇಕ ಪ್ರಮುಖ ಬೆಳವಣಿಗೆಗಳು ನಡೆದಿವೆ. ರಷ್ಯಾ ಉಕ್ರೇನ್ ಯುದ್ಧ, ಭಾರತದಲ್ಲಿ ಲೋಕಸಭಾ ಚುನಾವಣೆ, ಅಮೆರಿಕ ಅಧ್ಯಕ್ಷೀಯ ಚುನಾವಣೆ, ಬಾಂಗ್ಲಾದೇಶದ ಸರ್ಕಾರ ಪತನ ಹೀಗೆ ಅನೇಕಾನೇಕ ಪ್ರಮುಖ ಘಟನೆಗಳು ನಡೆದಿವೆ. ನಾವು ಭಾರತಕ್ಕೆ ನೇರ ಪರಿಣಾಮ ಬೀರುವ ವಿದೇಶದಲ್ಲಿ ಘಟನೆಗಳ ಬಗ್ಗೆ ಮಾತನಾಡುವುದು ಮುಖ್ಯವಾಗುತ್ತದೆ.
ನವದೆಹಲಿ: 2024ರ ಅಧ್ಯಾಯ (Year End) ಮುಗಿದಿದೆ. ಇಡೀ ವಿಶ್ವವೇ 2025ರ ಹೊಸ ವರ್ಷವನ್ನು ಸಂಭ್ರಮದಿಂದ (New Year) ಬರಮಾಡಿಕೊಂಡಿದೆ. ಹತ್ತಾರು ಬೆಳವಣಿಗೆಗಳು, ಖುಷಿ, ನೋವಿನ ಸಂಗತಿಗಳ ಮಧ್ಯೆ 2024ರ ವರ್ಷ ಅಚ್ಚಳಿಯದ ನೆನಪೊಂದನ್ನು ಬಿಟ್ಟು ಹೋಗಿದೆ. ಇದೆಲ್ಲದರ ಮಧ್ಯೆ ಭಾರತ 2024ರಲ್ಲಿ ಎದುರಿಸಿದ (Challenges and Impact) ಸವಾಲುಗಳು ಮತ್ತು 2025ರಲ್ಲಿ ಆಗಬಹುದಾದ ಪರಿಣಾಮಗಳ ಬಗೆಗಿನ ಒಂದು ವಿಶೇಷ ನೋಟ ಇಲ್ಲಿದೆ.
2024ರಲ್ಲಿ ಜಗತ್ತಿನಲ್ಲಿ ಅನೇಕ ಪ್ರಮುಖ ಬೆಳವಣಿಗೆಗಳು ನಡೆದಿವೆ. ರಷ್ಯಾ ಉಕ್ರೇನ್ ಯುದ್ಧ, ಭಾರತದಲ್ಲಿ ಲೋಕಸಭಾ ಚುನಾವಣೆ, ಅಮೆರಿಕ ಅಧ್ಯಕ್ಷೀಯ ಚುನಾವಣೆ, ಬಾಂಗ್ಲಾದೇಶದ ಸರ್ಕಾರ ಪತನ ಹೀಗೆ ಅನೇಕಾನೇಕ ಪ್ರಮುಖ ಘಟನೆಗಳು ನಡೆದಿವೆ. ಇಲ್ಲಿ ನಾವು ಭಾರತಕ್ಕೆ ನೇರ ಪರಿಣಾಮ ಬೀರುವ ವಿದೇಶದಲ್ಲಿ ಘಟನೆಗಳ ಬಗ್ಗೆ ಮಾತನಾಡುವುದು ಮುಖ್ಯವಾಗುತ್ತದೆ.
2024ರಲ್ಲಿ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂತು. ಅತ್ತ ಅಮೆರಿಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಸರ್ಕಾರ ಅಧಿಕಾರ ಕಳೆದುಕೊಂಡು ಡೊನಾಲ್ಡ್ ಟ್ರಂಪ್ ಅವರ ಪಕ್ಷ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿದೆ. ಜನವರಿ ತಿಂಗಳಲ್ಲಿ ಟ್ರಂಪ್ ಅಧಿಕೃತವಾಗಿ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಈ ಬಾರಿ ಟ್ರಂಪ್ ನಡವಳಿಕೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದಾಗ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಸಹಾನುಭೂತಿ ಹೊಂದಿದ್ದರು. ಆದರೆ ಎರಡನೇ ಅವಧಿಯಲ್ಲಿ ಕಟುಧೋರಣೆ ಅನುಸರಿಸಿದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅವರು ಹೇಳಿದ್ದ ಹೇಳಿಕೆ. ತೆರಿಗೆ ವಿಧಿಸುವ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ್ದ ಟ್ರಂಪ್, ಭಾರತ ಸೇರಿದಂತೆ ಯಾವುದೇ ರಾಷ್ಟ್ರಗಳು ಯುಎಸ್ ಉತ್ಪನ್ನಗಳಿಗೆ ತೆರಿಗೆ ವಿಧಿಸಿದರೆ, ನಾವು ಕೂಡ ಅದೇ ರೀತಿಯ ತೆರಿಗೆಯನ್ನು ವಿಧಿಸುತ್ತೇವೆ. ಟ್ಯಾಕ್ಸ್ ಅನ್ನೋದು ಪರಸ್ಪರ ಅವಲಂಬಿಸಿರುತ್ತದೆ. ಅವರು ನಮಗೆ ತೆರಿಗೆ ವಿಧಿಸಿದರೆ, ನಾವು ಅವರಿಗೆ ಅದೇ ಮೊತ್ತದ ಟ್ಯಾಕ್ಸ್ ವಿಧಿಸುತ್ತೇವೆ. ಅವರು ನಮಗೆ ಟ್ಯಾಕ್ಸ್ ಹಾಕದಿದ್ದರೆ ನಾವೂ ಹಾಕೋದಿಲ್ಲ ಎಂದು ಹೇಳಿದ್ದರು.
ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಸರ್ಕಾರವು ಯುಎಸ್ ವೀಸಾ ನಿಯಮಗಳನ್ನು ಕಠಿಣಗೊಳಿಸುವ ಸಾಧ್ಯತೆ ಇದೆ. ಅಮೆರಿಕಾದಲ್ಲಿರುವ ಭಾರತೀಯ ಐಟಿ ಕಂಪನಿಗಳ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಗಳಿದ್ದು, ಜತೆಗೆ ಸ್ಥಳೀಯರನ್ನೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಒತ್ತಡ ಹಾಕುವ ಸಾಧ್ಯತೆ ಇದೆ ಎಂದು ಎಸ್‌ಬಿಐ ಹೇಳಿದೆ
ಗಮನಿಸಬೇಕಾದ ಅಂಶವೆಂದರೆ, ಎಚ್ - 1ಬಿ ಕಾರ್ಯಕ್ರಮವನ್ನು ಟ್ರಂಪ್ ಸತತವಾಗಿ ಟೀಕೆ ಮಾಡುತ್ತಾ ಬಂದಿದ್ದಾರೆ. ಈ ವೀಸಾ ಕಾರ್ಯಕ್ರಮದಿಂದ ಅಮೆರಿಕದ ಉದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ ಎನ್ನುವ ಟ್ರಂಪ್, ಕಳೆದ ಬಾರಿ ಅವರ ಸರ್ಕಾರ ಇದ್ದ ಸಂದರ್ಭದಲ್ಲಿ ಎಚ್ 1ಬಿ ವೀಸಾ ದರಗಳನ್ನು ಸಾಕಷ್ಟು ಹೆಚ್ಚಳ ಮಾಡಿತ್ತು. ಹೀಗಾಗಿಯೇ, ಭಾರತೀಯ ಐಟಿ ಕಂಪನಿಗಳ ನೇಮಕಾತಿ ಪ್ರಕ್ರಿಯೆ ಸಂಕೀರ್ಣವಾಗಿತ್ತು. 2020 ರಲ್ಲಿ ಟ್ರಂಪ್ ಆಡಳಿತ ಸರ್ಕಾರವು ಈ ವೀಸಾ ಹೊಂದಿರುವವರಿಗೆ ಹೆಚ್ಚಿನ ಕನಿಷ್ಠ ವೇತನ ನಿಯಮ ಜಾರಿಗೆ ತರಲು ಕೂಡ ಮುಂದಾಗಿತ್ತು. ಆದರೆ, ಅಲ್ಲಿನ ನ್ಯಾಯಾಲಯ ನಿರ್ಬಂಧಿಸಿತ್ತು. ಟ್ರಂಪ್ ಅವಧಿಗಿಂತ ಇತರೆ ಅಧ್ಯಕ್ಷರ ಅವಧಿಯಲ್ಲಿ ನೀಡಿದ ವೀಸಾ ಸಂಖ್ಯೆಯೇ ಹೆಚ್ಚಿವೆ ಎಂದು ಎಸ್‌ಬಿಐ ತಿಳಿಸಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಭಾರತದ ಮೇಲೆ ಯಾವ ರೀತಿಯ ನಡೆ ತೋರುತ್ತಾರೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ.
ಕೆನಡಾದಿಂದಲೂ ಕಿರಿಕ್!
ಕೆನಡಾದಲ್ಲಿ ಖಾಲಿಸ್ತಾನಿ ಬೆಂಬಲಿಗರ ಪ್ರತಿಭಟನೆಗಳು ಕಳೆದ ಕೆಲವು ವರ್ಷಗಳಿಂದ ತೀವ್ರ ಸ್ವರೂಪದಲ್ಲಿ ನಡೆಯುತ್ತಿವೆ. ಈ ರೀತಿ ಪ್ರತಿಭಟನೆ ನಡೆಯುವಾಗ ಭಾರತದ ಧ್ವಜವನ್ನು ಅವಮಾನಿಸುವುದು ಹಾಗೂ ಭಾರತದ ದಿವಂಗತ ಹಾಗೂ ಪ್ರಮುಖ ನಾಯಕರಿಗೆ ಅವಮಾನ ಮಾಡುವ ಪ್ರಸಂಗಗಳು ಸಹ ನಡೆದಿವೆ. ಈ ರೀತಿಯ ಘಟನೆಗಳಿಗೆ ಭಾರತವು ತನ್ನ ವಿರೋಧವನ್ನು ನಿರಂತರವಾಗಿ ದಾಖಲಿಸಿಕೊಂಡೇ ಬಂದಿದೆ.
ಖಾಲಿಸ್ತಾನದ ಪ್ರತ್ಯೇಕವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಹಾಗೂ ಕೆನಡಾದ ನಡುವೆ ವಿದೇಶಾಂಗ ನೀತಿಯಲ್ಲಿ ಬಿರುಕು ಮೂಡಿದೆ. ಈ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಪಾತ್ರವಿರುವುದಾಗಿ ಕೆನಡಾ ಆರೋಪಿಸಿತ್ತು. ಇದಕ್ಕೆ ಭಾರತವು ತನ್ನ ವಿರೋಧವನ್ನು ದಾಖಲಿಸಿತ್ತು. ಈ ಪ್ರಕರಣ ಇತ್ತೀಚಿನ ಬೆಳವಣಿಗೆ ಕೆನಡಾ ಹಾಗೂ ಭಾರತದ ನಡುವೆ ಇತ್ತೀಚಿನ ವರ್ಷಗಳಲ್ಲಿನ ಸಂಬಂಧ ಹೇಳಿಕೊಳ್ಳುವಂತಿಲ್ಲ. ಅದಕ್ಕೆ ಖಾಲಿಸ್ತಾನದ ಹೋರಾಟವೂ ಕಾರಣ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಓಟ್‌ಬ್ಯಾಂಕ್ ಕಾರಣಕ್ಕಾಗಿ ಎರಡು ದೇಶಗಳ ನಡುವೆ ಸಮಸ್ಯೆಗಳು ಉದ್ಭವಿಸುತ್ತಿವೆ. ಕೆನಡಾದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ 770,000 ಜನ ಇದ್ದಾರೆ. ಇವರುಗಳ ಪ್ರತ್ಯೇಕ ಖಲಿಸ್ಥಾನದ ಆಸೆಗೆ ಟ್ರೊಡೋ ತುಪ್ಪ ಸುರಿಯುತ್ತಿದ್ದಾರೆ.
ಹೀಗಾಗಿ ಮುಂದಿನ 2025ರ ವರ್ಷ ಕೂಡ ಜಸ್ಟಿನ್ ಟ್ರುಡೊ ಅಧಿಕಾರದಲ್ಲಿ ಮುಂದುವರಿದರೆ ಭಾರತದ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Post a Comment