ಜಾರಿ ಯಾಗುತ್ತಾ ಏಕರೂಪ ನಾಗರಿಕ ಸಂಹಿತೆ?
ಎನ್‌ಆರ್‌ಸಿ ಎನ್ನುವುದು ನಾಗರಿಕರ ನೊಂದಣಿ ಯೋಜನೆಯಾಗಿದೆ. ಇದು ದೇಶದ ಎಲ್ಲಾ ಪ್ರಜೆಗಳ ಅಧಿಕೃತ ಪಟ್ಟಿಯಾಗಿರುತ್ತದೆ. ಅಕ್ರಮವಾಗಿ ವಲಸೆ ಬಂದವರನ್ನು ಗುರುತಿಸಿ ಹೊರಗಿಡುವುದು ಇದರ ಮೂಲ ಉದ್ದೇಶ. ಅದರಲ್ಲೂ ಮಯನ್ಮಾರ್ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ ಜನರನ್ನು ಗುರುತಿಸಲು ಈ ಎನ್‌ಆರ್‌ಸಿ ಸಹಾಯವಾಗುವ ನಿರೀಕ್ಷೆ ಇದೆ.
ನವದೆಹಲಿ: ದೇಶದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ದೇಶದಲ್ಲಿ ಸಾಕಷ್ಟು ವಿರೋಧ ಕೇಳಿಬಂದಿದೆ. ಹಲವರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ (Central Government) ಇವುಗಳನ್ನು ಜಾರಿಗೆ ತರಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು 2025ರಲ್ಲಿ ಇವುಗಳು ಜಾರಿಯಾಗುತ್ತವಾ ಎಂಬ ಪ್ರಶ್ನೆ ಎದುರಾಗಿದೆ.
ಏನಿದು ಎನ್‌ಆರ್‌ಸಿ?
ಎನ್‌ಆರ್‌ಸಿ ಎನ್ನುವುದು ನಾಗರಿಕರ ನೊಂದಣಿ ಯೋಜನೆಯಾಗಿದೆ. ಇದು ದೇಶದ ಎಲ್ಲಾ ಪ್ರಜೆಗಳ ಅಧಿಕೃತ ಪಟ್ಟಿಯಾಗಿರುತ್ತದೆ. ಅಕ್ರಮವಾಗಿ ವಲಸೆ ಬಂದವರನ್ನು ಗುರುತಿಸಿ ಹೊರಗಿಡುವುದು ಇದರ ಮೂಲ ಉದ್ದೇಶ. ಅದರಲ್ಲೂ ಮಯನ್ಮಾರ್ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ ಜನರನ್ನು ಗುರುತಿಸಲು ಈ ಎನ್‌ಆರ್‌ಸಿ ಸಹಾಯವಾಗುವ ನಿರೀಕ್ಷೆ ಇದೆ.
ಎನ್ಆರ್ಸಿಗೆ ವಿರೋಧ ಏಕೆ?
ಎನ್‌ಆರ್‌ಸಿ ಕಾಯ್ದೆ ಜಾರಿಯ ಮೂಲಕ ಅಲ್ಪಸಂಖ್ಯಾತ ಸಮುದಾಯಗಳನ್ನು ತುಳಿಯುವ ಸಾಧ್ಯತೆಗಳಿವೆ ಎಂದು ಇದಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಭಾರತದ ಯಾವುದೇ ಧರ್ಮದ ಪ್ರಜೆಗಳು ಎನ್‌ಆರ್‌ಸಿ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಈ ಕಾಯ್ದೆಯಿಂದ ಅವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿತ್ತು.
ಏನಾಗಲಿದೆ ಎನ್‌ಆರ್‌ಸಿ ಕಾಯ್ದೆ ಭವಿಷ್ಯ?
ಎನ್ಆರ್ ಸಿಯನ್ನು ಭಾರತದಲ್ಲಿ ಜಾರಿಗೆ ಬರುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. 2019 ರಲ್ಲಿ ಕೇಂದ್ರ ಸರ್ಕಾರವು ಎನ್‌ಆರ್‌ಸಿ ಜಾರಿಗೆ ಮುಂದಾಗಿತ್ತು. ಆದರೆ, ಅದನ್ನು ಮುಂದೂಡಲಾಗಿದ್ದು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಅಸ್ಸಾಂನಲ್ಲಿ ಮಾತ್ರ ಜಾರಿ ಮಾಡಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ಅರ್ಜಿದಾರರು ಅಥವಾ ಕುಟುಂಬವು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಭಾಗವಾಗಲು ಅರ್ಜಿ ಸಲ್ಲಿಸದಿದ್ದರೆ ಆಧಾರ್ ಕಾರ್ಡ್ ಅರ್ಜಿಗಳನ್ನು ತಿರಸ್ಕರಿಸುವ ನಿಯಮವನ್ನು ಜಾರಿಗೊಳಿಸುತ್ತಿದೆ. ಭವಿಷ್ಯದಲ್ಲಿ ಆಧಾರ್ ಕಾರ್ಡ್‌ಗಳನ್ನು ನೀಡಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಟೋಕಾಲ್ (ಎಸ್‌ಒಪಿ) ನೀಡುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ ಎಂದು ಅಸ್ಸಾಂ ಸಿಎಂ ಹೇಳಿದ್ದರು. ಸದ್ಯ ಅಸ್ಸಾಂ ಎನ್‌ಆರ್‌ಸಿ ಜಾರಿಗೆ ಮುಂದಾಗಿದ್ದು, ಅಕ್ರಮ ವಲಸಿಗರನ್ನು ಹೊರಹಾಕುವ ಸಲುವಾಗಿ ಜಾರಿಗೆ ಮುಂದಾಗಿರುವ ಈ ಎನ್‌ಆರ್‌ಸಿ ಕಾಯ್ದೆ 2025ರಲ್ಲಿ ದೇಶಾದ್ಯಂತ ಜಾರಿಯಾಗುತ್ತಾ ಎಂದು ಕಾದು ನೋಡಬೇಕಿದೆ.
2025ರಲ್ಲಿ ಜಾರಿಯಾಗುತ್ತಾ ಏಕರೂಪ ನಾಗರಿಕ ಸಂಹಿತೆ
ದೇಶದಲ್ಲಿ ಈಗ ಧರ್ಮವನ್ನು ಆಧರಿಸಿ ವೈಯಕ್ತಿಕ ಕಾನೂನುಗಳಿವೆ. ಅದರ ಬದಲು ಎಲ್ಲಾ ನಾಗರಿಕರಿಗೆ ಸಾಮಾನ್ಯ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವೈಯಕ್ತಿಕ ಕಾನೂನುಗಳೆಂದರೆ, ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮುಂತಾದ ವಿಷಯಗಳಲ್ಲಿ ಹಿಂದೂಗಳಿಗೆ ಪ್ರತ್ಯೇಕ ಕಾನೂನು, ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಇದೆ. ಇದರ ಬದಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಕೇಂದ್ರ ನಿರ್ಧರಿಸಿದೆ, ಅದರ ಪ್ರಕಾರ, ದೇಶದ ಎಲ್ಲಾ ನಾಗರಿಕರಿಗೂ ಒಂದೇ ರೀತಿಯ ನಾಗರಿಕ ಕಾನೂನು ಜಾರಿಗೆ ತರುವ ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ಜಾತ್ಯತೀತ ನಾಗರಿಕ ಸಂಹಿತೆ ಎಂದಿದ್ದ ಮೋದಿ
ಪ್ರಧಾನಮಂತ್ರಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಅಸ್ತಿತ್ವದಲ್ಲಿರುವ “ಕೋಮು ನಾಗರಿಕ ಸಂಹಿತೆ” ಬದಲಿಗೆ “ಜಾತ್ಯತೀತ ನಾಗರಿಕ ಸಂಹಿತೆ” ಯತ್ತ ಸಾಗುವ ಅಗತ್ಯವನ್ನು ಒತ್ತಿ ಹೇಳಿದ್ದರು ಹೀಗಾಗಿ 2025ರಲ್ಲೇ ಯುಸಿಸಿ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ “ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ” ಕುರಿತು ಚರ್ಚೆಯ ಸಂದರ್ಭದಲ್ಲಿ, ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲು ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸಿದ್ದರು. ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕಲ್ಪನೆಯು ಸಂವಿಧಾನ ಸಭೆಯ ಸಮಯದಲ್ಲಿ ಪ್ರಮುಖ ಚರ್ಚೆಯಾಗಿದೆ ಎಂದು ಅವರು ಒತ್ತಿ ಹೇಳಿದ್ದರು. “ನಾವು ಜಾತ್ಯತೀತ ನಾಗರಿಕ ಸಂಹಿತೆಗಾಗಿ ಪೂರ್ಣ ಬಲದಿಂದ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದರು.
ಇದೇ ತಿಂಗಳು ಉತ್ತರಾಖಂಡದಲ್ಲಿ ಯುಸಿಸಿ ಜಾರಿ
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲೂ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸಲು ಕ್ರಮವಹಿಸಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಹೇಳಿದ್ದರು. ಉತ್ತರಾಖಂಡದಲ್ಲಿ 2025ರ ಜನವರಿಯಿಂದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಮತ್ತು ಉತ್ತರಾಖಂಡವು ಸ್ವಾತಂತ್ರ್ಯ. ನಂತರ ಯುಸಿಸಿಯನ್ನು ಜಾರಿಗೊಳಿಸುವ ಮೊದಲ ರಾಜ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.
ಯುಸಿಸಿಯ ಸಾಂವಿಧಾನಿಕ ಮತ್ತು ಜಾತ್ಯತೀತ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಮೂಲಕ ಯುಸಿಸಿಯ ಅನುಷ್ಠಾನದ ಅಗತ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್ ಪುನರಾವರ್ತಿತ ಅವಲೋಕನಗಳನ್ನು ಮಾಡಿದೆ ಎಂದು ಪ್ರಧಾನಿ ಹೇಳಿದ್ದರು. “ಯುಸಿಸಿಯನ್ನು ದೇಶಕ್ಕೆ ತರಬೇಕೆಂದು ಸುಪ್ರೀಂ ಕೋರ್ಟ್ ಕೂಡ ಹಲವು ಬಾರಿ ಹೇಳಿದೆ” ಎಂದು ಪ್ರಧಾನಿ ಸಂಸತ್ನಲ್ಲಿ ತಿಳಿಸಿದ್ದು, 2025ರಲ್ಲೇ ಜಾರಿಗೆ ಬರುತ್ತಾ ಎಂದು ಕಾದು ನೋಡಬೇಕಿದೆ.

Post a Comment