ಇಂದು ಆಗಸ್ಟ್ 14, ದೇಶ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಆದರೆ ಈ ಪೊಲೀಸ್ ಹುತಾತ್ಮರ ಕುಟುಂಬಗಳಿಗೆ ಯಾವ ಸಂಭ್ರಮವೂ ಇಲ್ಲ. 30 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ ಬಲಿಯಾಗಿದ್ದ ಪೊಲೀಸರ ಕುಟುಂಬಸ್ಥರು ಈಗಲೂ ಕಣ್ಣೀರಿಡುತ್ತಿದ್ದಾರೆ. ಅಷ್ಟಕ್ಕೂ ಅಂದು ನಿಜವಾಗಿಯೂ ಏನಾಗಿತ್ತು?
ಚಾಮರಾಜನಗರ (ಆ.14) ಕಾಡುಗಳ್ಳ ವೀರಪ್ಪನ್ (Veerappan) ನಡೆಸಿದ ಘನಘೋರ ಹತ್ಯಾಕಾಂಡವೊಂದಕ್ಕೆ (massacre) ಇಂದಿಗೆ ಸರಿಯಾಗಿ ಮೂವತ್ತು ವರ್ಷ. ಒಬ್ಬರು ಎಸ್ಪಿ (SP), ಒಬ್ಬರು ಸಬ್ ಇನ್ಸ್‌ಪೆಕ್ಟರ್ (Sub Inspector), ಮತ್ತೊಬ್ಬರು ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ASI) ಹಾಗೂ ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳು (Police Constable) ನರಹಂತಕನ ರಾಕ್ಷಸಿ ಕೃತ್ಯಕ್ಕೆ ಬಲಿಯಾಗಿ ಮೂವತ್ತು ವರ್ಷಗಳೇ ಉರುಳಿ ಹೋಗಿದ್ದು ಆತನ ಈ ಕುಕೃತ್ಯದ ಕರಾಳ ನೆನಪು ಇಂದಿಗೂ ಮೈಯೆಲ್ಲಾ ಉರಿಯುವಂತೆ ಮಾಡುತ್ತಿದೆ. ಇಡೀ ದೇಶ ಈಗ ಸ್ವಾತಂತ್ರ್ಯ ದಿನದ ಅಮೃತಮಹೋತ್ಸವದ ಸಂಭ್ರಮಾಚರಣೆಯಲ್ಲಿದೆ. ಆದರೆ ಕಾಡುಗಳ್ಳನ ಅಟ್ಟಹಾಸಕ್ಕೆ ಬಲಿಯಾದ ಆ ಆರು ಮಂದಿ ಪೊಲೀಸ್ ಅಧಿಕಾರಿ (Police Officer) ಹಾಗೂ ಸಿಬ್ಬಂದಿಯ ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ.
ಹುತಾತ್ಮ ಪೊಲೀಸರ ಮನೆಯಲ್ಲಿ ಶೋಕ
ಹೌದು ಎಸ್ಪಿ ಹರಿಕೃಷ್ಣ, ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್, ವೈರ್‌ಲೆಸ್ ವಿಭಾಗದ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಎಸ್.ಬಿ. ಬೆನೆಗೊಂಡ, ಪೊಲೀಸ್ ಕಾನ್ಸ್‌ಟೇಬಲ‌್‌ಗಳಾದ ಕೆ.ಎಂ. ಅಪ್ಪಚ್ಚು, ಬಿ.ಎ. ಸುಂದರ್ ಹಾಗೂ ಸಿ.ಎಂ. ಕಾಳಪ್ಪ ಅವರು ಅಂದು ನರಹಂತಕನ ಕ್ರೌರ್ಯಕ್ಕೆ ಬಲಿಯಾಗಿದ್ದು ಅವರ ಕುಟುಂಬಗಳಲ್ಲಿ ಶೋಕ ಮನೆ ಮಾಡಿದೆ.
ಹುತಾತ್ಮ ಪೊಲೀಸರುನರಹಂತಕನ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದಿದ್ದ ಖಾಕಿ ಪಡೆ
ಹೊಗೇನಕಲ್ ಬಳಿ ಪೊಲೀಸರ ಹತ್ಯೆ, ರಾಮಾಪುರ ಪೊಲೀಸ್ ಠಾಣೆಯ ಮೇಲೆ ದಾಳಿ, ಡಿಸಿಎಫ್ ಶ್ರೀನಿವಾಸ್ ಹತ್ಯೆ, ಪಾಲಾರ್ ಬಾಂಬ್ ಸ್ಫೋಟ ಹೀಗೆ ನರಹಂತಕ ವೀರಪ್ಪನ್‌ನ ಹಲವು ಕುಕೃತ್ಯಗಳಿಂದ ಪೊಲೀಸ್ ಅಧಿಕಾರಿಗಳು ರೋಸಿ ಹೋಗಿದ್ದರು. ಹೀಗಾಗಿ ಹೇಗಾದರು ಮಾಡಿ ಆತನನ್ನು ಸದೆಬಡಿಯಬೇಕೆಂಬ ಛಲ ಹೊತ್ತು ಎಸ್ಪಿ ಟಿ.ಹರಿಕೃಷ್ಣ, ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್ ಇನ್ನಿಲ್ಲದ ಪ್ರಯತ್ನ ನಡೆಸಿದ್ದ
ರು ಪೊಲೀಸ್ ಹುತಾತ್ಮರ ಸ್ಮಾರಕ
ತನ್ನ ಬಲಗೈ ಬಂಟನ ಹತ್ಯೆಯಿಂದ ಕ್ಷುದ್ರನಾಗಿದ್ದ ವೀರಪ್ಪನ್
ಗುರುನಾಥಾಚಾರಿ ಅಲಿಯಾಸ್ ಗುರುನಾಥನ್ ಎಂಬಾತ ವೀರಪ್ಪನ್ ಬಲಗೈ ಬಂಟ ಹಾಗೂ ಆತನ ತಂಡದಲ್ಲಿ ಎರಡನೇ ಮುಖ್ಯಸ್ಥನಾಗಿದ್ದ. ನಿಖರ ಗುರಿಕಾರನೂ ಆಗಿದ್ದ ಗುರುನಾಥನ್ ಆನೆದಂತ ಮಾರಾಟ, ಶಸ್ತ್ರಾಸ್ತ್ರ ಖರೀದಿ, ತಮ್ಮ ತಂಡಕ್ಕೆ ಆಹಾರ ಪೂರೈಸುವ ವ್ಯವಹಾರ ನೋಡಿಕೊಳ್ಳುತ್ತಿದ್ದ. ವೀರಪ್ಪನ್ ನಡೆಸಿದ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತನ ತಲೆಗೆ ಸರ್ಕಾರ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿತ್ತು.
ಇದನ್ನೂ ಓದಿ: Explained: ಹೇಗಿದೆ ಭಾರತ-ಪಾಕ್ ಸಂಬಂಧ? ವಾಸ್ತವಿಕ ಅಂಶಗಳನ್ನು ವಿವರಿಸುವ ಪುಸ್ತಕವಿದು
ವೇಷ ಮರೆಸಿಕೊಂಡು ಕಾಡಿಗೆ ಹೋಗಿದ್ದ ಪಿಎಸ್ಐ
ಈ ಗುರುನಾಥನ್ ನ್ನು ಹೇಗಾದರು ಬಲೆಗೆ ಬೀಳಿಸಿ ಆತನನ್ನು ಬಳಸಿಕೊಂಡು ವೀರಪ್ಪನ್‌ನ್ನು ಬಂಧಿಸಬೇಕೆಂಬ ಉದ್ದೇಶದಿಂದ ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್ ಅವರು ಮಾಹಿತಿದಾರನೊಬ್ಬನ ಮೂಲಕ ಶಸ್ತ್ರಾಸ್ತ್ರ ವ್ಯಾಪಾರಿಯ ಸೋಗಿನಲ್ಲಿ ಕಾಡಿಗೆ ತೆರಳಿದ್ದರು, ಮೊದಲ ಪ್ರಯತ್ನದಲ್ಲೇ ಸ್ವಲ್ಪ ಯಶಸ್ಸನ್ನೂ ಕಂಡಿದ್ದರು.
ಪೊಲೀಸರ ಗುಂಡಿಗೆ ಬಲಿಯಾಗಿದ್ದ ವೀರಪ್ಪನ್ ಆಪ್ತ
ತಾವೊಬ್ಬ ಶಸ್ತ್ರಾಸ್ತ್ರ ವ್ಯಾಪಾರಿ ಎಂದು ನಂಬಿಸಿ ಎಕೆ 47 ಗನ್ ಗಳನ್ನು ಸರಬರಾಜು ಮಾಡುವುದಾಗಿ ಇನ್ನು ಹದಿನೈದು ದಿನದಲ್ಲಿ ತಮ್ಮ ಬಾಸ್ ಜೊತೆ ಬರುವುದಾಗಿ ನಂಬಿಸಿದ್ದರು. ಹೇಳಿದ ಮಾತಿನಂತೆ 1992 ರ ಫೆಬ್ರವರಿ 18 ರಂದು ಎಸ್ಪಿ ಹರಿಕೃಷ್ಣ ಹಾಗು ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್ ವ್ಯಾಪಾರಿಗಳ ಸೋಗಿನಲ್ಲಿ ಕಾಡಿಗೆ ತೆರಳಿ ಗುರುನಾಥನ್‌ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದು ವೀರಪ್ಪನ್ ನ್ನು ಕೆರಳಿಸಿಬಿಟ್ಟಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ಗುರುನಾಥನ್ ಕತ್ತಲೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ಈ ಮಾಹಿತಿ ತಿಳಿಯುತ್ತಿದ್ದಂತೆ ವೀರಪ್ಪನ್ ಕ್ಷುದ್ರನಾಗಿ ಹೋಗಿದ್ದ.
ಪೊಲೀಸ್ ಮಾಹಿತಿದಾರನಿಗೆ ಬೆದರಿಕೆ
ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ವೀರಪ್ಪನ್, ಪೊಲೀಸ್ ಮಾಹಿತಿದಾರ ಕಮಲಾನಾಯಕ ಎಂಬಾತನ ಕುಟುಂಬವನ್ನು ಗನ್ ಪಾಯಿಂಟ್‌ನಲ್ಲಿ ಒತ್ತೆಯಾಗಿರಿಸಿಕೊಂಡು ಹೇಗಾದರೂ ಮಾಡಿ ತನ್ನ ಬಳಿಗೆ ಎಸ್ಪಿ ಹರಿಕೃಷ್ಣ, ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್ ಅವರನ್ನು ಕರೆತರಬೇಕು, ಇಲ್ಲದಿದ್ದರೆ ನಿನ್ನ ಕುಟುಂಬವನ್ನು ಮುಗಿಸಿಬಿಡುವುದಾಗಿ ಕಮಲಾನಾಯಕ್‌ಗೆ ಬೆದರಿಕೆ ಒಡ್ಡಿದ್ದ.
ಕಮಲಾನಾಯಕ್ ಮಾತು ನಂಬಿ ಕಾಡಿಗೆ ಹೊರಟ ಪೊಲೀಸ್ ಅಧಿಕಾರಿಗಳು
ಕಮಲಾನಾಯಕ್ ಪೊಲೀಸರಿಗೆ ಬಹಳ ನಂಬಿಕಸ್ಥ ಮಾಹಿತಿದಾರನಾಗಿದ್ದ. 1992 ಆಗಸ್ಟ್13 ರಂದು ಎಸ್ಪಿ ಹರಿಕೃಷ್ಣ ಹಾಗು ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್ ಬಳಿಗೆ ಪೊಲೀಸ್ ಮಾಹಿತಿದಾರ ಕಮಲಾನಾಯಕ್ ಬರುತ್ತಾನೆ. "ವೀರಪ್ಪನ್‌ಗೆ ಈಗ ಗನ್ ಹಾಗು ಮದ್ದುಗುಂಡುಗಳ ಅವಶ್ಯಕತೆ ಇದೆ. ಆತನ ಬಳಿ ಸಾಕಷ್ಟು ಆನೆದಂತಗಳಿದ್ದು ಅದನ್ನು ಮಾರಾಟ ಮಾಡಿ ಗನ್ ಹಾಗು ಮದ್ದುಗುಂಡು ಗಳನ್ನು ಖರೀದಿಸಬೇಕು ಎಂದುಕೊಂಡಿದ್ದು ಶಸ್ತ್ರಾಸ್ತ್ರ ಖರೀದಿಗೆ ಪ್ಲಾನ್ ಮಾಡಲು ತನಗೆ ಹೇಳಿದ್ದಾನೆ, ನೀವು ಇದೇ ಅವಕಾಶ ಬಳಸಿಕೊಂಡು ವ್ಯಾಪಾರಿಗಳ ಸೋಗಿನಲ್ಲಿ ಹೋಗಿ ಆತನನ್ನು ಬಂಧಿಸಬಹುದು, ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇನೆ" ಎಂದು ನಂಬಿಸಿದ್ದಾನೆ. ಈತನ ಮಾತನ್ನು ನಂಬಿದ ಪೊಲೀಸ್ ಅಧಿಕಾರಿಗಳು ಮರುದಿನವೇ ಅಂದರೆ 1992 ಆಗಸ್ಟ್ 14 ರಂದು ಮೀಣ್ಯಂ ಅರಣ್ಯಕ್ಕೆ ಹೊರಡುತ್ತಾರೆ.
ಕಾಡಿಗೆ ತೆರಳಿದ್ದ ಪೊಲೀಸರ ತಂಡ
ಏನಾದರು ಅನಾಹುತ ಸಂಭವಿಸಿದಲ್ಲಿ ತಮಗೆ ರಕ್ಷಣೆ ನೀಡಲು ಕೆಎಸ್‌ಆರ್‌ಪಿ ವ್ಯಾನ್ ತಮ್ಮ ಹಿಂದೆಯೇ ಬರಬೇಕು ಎಂದು ಸಹ ಸೂಚಿಸಿ, ಅಂಬಾಸಿಡಾರ್ ಕಾರೊಂದರಲ್ಲಿ ಎಸ್ಪಿ ಹರಿಕೃಷ್ಣ, ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್ ಅವರು ತಮ್ಮ ಜೊತೆ ಮಾಹಿತಿದಾರ ಕಮಲಾನಾಯಕ್, ಹಾಗು ಮೂವರು ಪೊಲೀಸ್ ಕಾನ್ಸ್‌ಟೇಬಲ್ ಗಳನ್ನು ಕೂರಿಸಿಕೊಂಡು ತೆರಳುತ್ತಾರೆ.
ವೀರಪ್ಪನ್ ಗ್ಯಾಂಗ್ ನಿಂದ ಗುಂಡಿನ ಸುರಿಮಳೆ
ಮೀಣ್ಯಂ ಬಳಿ ಹೋಗುತ್ತಿದ್ದಂತೆ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ಮು ಇಟ್ಟಿರುವುದು ಕಂಡು ಬಂದು ಕಾರು ನಿಲ್ಲಿಸುತ್ತಿದ್ದಂತೆ ಕಾರಿನ ಎಡಬದಿ ಕುಳಿತಿದ್ದ ಕಮಲಾನಾಯಕ್ ಕಾರಿನಿಂದ ಇಳಿದು ಓಡುತ್ತಾನೆ. ಆತ ಓಡಿ ಹೋಗುತ್ತಿದ್ದಂತೆ ಗುಡ್ಡದ ಮೇಲೆ ಅವಿತು ಕುಳಿತಿದ್ದ 50 ರಿಂದ 60 ಮಂದಿಯಿದ್ದ ವೀರಪ್ಪನ್ ಗ್ಯಾಂಗ್ ಕಾರಿನಲ್ಲಿದ್ದವರ ಮೇಲೆ ಗುಂಡಿನ ಸುರಿಮಳೆಗೈಯ್ಯುತ್ತದೆ.
6 ಪೊಲೀಸರ ಸಾವು, ಹಲವರಿಗೆ ಗಾಯ
ಗುಂಡಿನ ಶಬ್ದ ಕೇಳಿ ಅನತಿ ದೂರದಲ್ಲಿ ಬರುತ್ತಿದ್ದ ಕೆಎಸ್‌ಆರ್‌ಪಿ ವ್ಯಾನ್ ಸಹ ವೇಗವಾಗಿ ಧಾವಿಸುತ್ತದೆ. ಪೊಲೀಸರು ಸರಿಯಾಗಿ ಪ್ರತಿದಾಳಿ ನಡೆಸಲು ಅವಕಾಶವಾಗದಂತೆ ವೀರಪ್ಪನ್ ಮತ್ತು ತಂಡದವರು ಗುಂಡಿನ ದಾಳಿ ನಡೆಸುತ್ತಾರೆ. ಈ ವೇಳೆ ಎಸ್ಪಿ ಹರಿಕೃಷ್ಣ, ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್, ವೈರ್‌ಲೆಸ್ ವಿಭಾಗದ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಎಸ್.ಬಿ.ಬೆನೆಗೊಂಡ, ಪೊಲೀಸ್ ಕಾನ್ಸ್‌ಟೇಬಲ‌್‌ಗಳಾದ ಕೆ.ಎಂ. ಅಪ್ಪಚ್ಚು, ಬಿ.ಎ ಸುಂದರ್, ಸಿಎಂ ಕಾಳಪ್ಪ ಅವರು ಗುಂಡಿನ ದಾಳಿಗೆ ಬಲಿಯಾಗುತ್ತಾರೆ. ಏಳೆಂಟು ಮಂದಿ ಪೊಲೀಸರು ಗುಂಡೇಟಿನಿಂದ ಗಾಯಗೊಳ್ಳುತ್ತಾರೆ. ಇದೇ ವೇಳೆ ಪೊಲೀಸರು ಹಾರಿಸಿದ ಗುಂಡಿಗೆ ಮಾಹಿತಿದಾರ ಕಮಲಾನಾಯಕ್ ಸಹ ಬಲಿಯಾಗುತ್ತಾನೆ.
ಪೊಲೀಸ್ ವ್ಯಾನ್‌ನಲ್ಲಿದ್ದ ಶಸ್ತ್ರಾಸ್ತ್ರ ದೋಚಿದ ವೀರಪ್ಪನ್
ಗುಂಡಿನ ಚಕಮಕಿ ಯಲ್ಲಿ ಮೇಲುಗೈ ಸಾಧಿಸಿದ ವೀರಪ್ಪನ್ ಮತ್ತು ಆತನ ತಂಡ ಪೊಲೀಸ್ ವ್ಯಾನ್‌ನಲ್ಲಿದ್ದ ಎಸ್.ಎಲ್.ಆರ್ ಗನ್ ಗಳು ಸೇರಿದಂತೆ ಕೆಲವು ಶಸ್ತ್ರಾಸ್ತ್ರ ಗಳನ್ನು ದೋಚಿಕೊಂಡು ಹೋಗುತ್ತದೆ. ಆ ವೇಳೆಗೆ ಆ ಮಾರ್ಗದಲ್ಲಿ ಖಾಸಗಿ ಬಸ್ ಬರುತ್ತದೆ. ಬಸ್ ನಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಬಿದ್ದಿದ್ದ ಪೊಲೀಸರನ್ನು ಬಸ್ಸಿನಲ್ಲಿ ರಾಮಾಪುರಕ್ಕೆ ಕರೆದೊಯ್ತುತ್ತಾರೆ. ಅದೇ ಮಾರ್ಗದಲ್ಲಿ ಬಂದ ಕೆಲವು ದ್ವಿಚಕ್ರ ವಾಹನ ಸವಾರರು ತಕ್ಷಣ ರಾಮಾಪುರ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ: Explained: ಅಲ್ ಖೈದಾ ಮುಖ್ಯಸ್ಥನ ಹತ್ಯೆ ಹೇಗಾಯ್ತು? ಅಮೆರಿಕಾ ಇವನನ್ನೇ ಏಕೆ ಟಾರ್ಗೆಟ್ ಮಾಡಿತ್ತು?
ಕರಾಳ ಘಟನೆ ನಡೆದು ಇಂದಿಗೆ 30 ವರ್ಷ
ಒಟ್ಟಾರೆ ವೀರಪ್ಪನ್ ನ ಬ್ಲಾಕ್‌ಮೇಲ್‌ಗೆ ಒಳಗಾದ ಪೊಲೀಸ್ ಮಾಹಿತಿದಾರನ ಷಡ್ಯಂತ್ರ ಹಾಗು ವೀರಪ್ಪನ್‌ನ ಸೇಡಿಗೆ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿ ಬಲಿಯಾಗಿ ಹೋಗಿದ್ದು ಮಾತ್ರ ಘನಘೋರ ದುರಂತ. ಈ ಹತ್ಯಾಕಾಂಡ ನಡೆದು ಇಂದಿಗೆ 30 ವರ್ಷಗಳೇ ಕಳೆದುಹೋಗಿದ್ದರೂ ಆ ಕರಾಳ ದಿನದ ಶೋಕ ಪೊಲೀಸ್ ಕುಟುಂಬಗಳಲ್ಲಿ
ಮಡುಗಟ್ಟಿದೆ.
(ವರದಿ: ಎಸ್‌ಎಂ. ನಂದೀಶ್, ಚಾಮರಾಜನಗರ)



Post a Comment