ಗಳೂರು: ತಮ್ಮ ನೇರ, ಖಾರವಾದ ಹೇಳಿಕೆಗಳಿಂದಲೇ 'ಹಿಂದೂ ಫೈರ್ ಬ್ರ್ಯಾಂಡ್' ಎಂದು ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ರಾಜ್ಯಾದ್ಯಂತ 'ಕೇಸರಿ ಸಮಿತಿ'ಯನ್ನು ಸಂಘಟಿಸುವ ಮೂಲಕ ಹಿಂದುತ್ವದ ಅಲೆಯನ್ನು ಮತ್ತಷ್ಟು ಪ್ರಬಲಗೊಳಿಸಲು ಮುಂದಾಗಿದ್ದಾರೆ.
ಇದು ಒಂದು ಕಡೆಯಾದರೆ, ಮತ್ತೊಂದೆಡೆ, 'ಯತ್ನಾಳ್ ಇಲ್ಲದಿದ್ದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ, ಅವರನ್ನು ಮರಳಿ ತನ್ನಿ' ಎಂದು ಬಿಜೆಪಿಯೊಳಗಿನಿಂದಲೇ ಬಂಡಾಯದ ದನಿ ಎದ್ದಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಯತ್ನಾಳ್ ಮುಂದಾಳತ್ವದಲ್ಲಿ ರಾಜ್ಯವ್ಯಾಪಿ ಸಂಘಟನೆ
ದಿನದಿಂದ ದಿನಕ್ಕೆ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಯತ್ನಾಳ್, ಇದೀಗ ತಮ್ಮ ಹಿಂದುತ್ವದ ಅಜೆಂಡಾವನ್ನು ಸಾಂಸ್ಥಿಕ ರೂಪಕ್ಕಿಳಿಸಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಮುಧೋಳದಲ್ಲಿ ಕೇಸರಿ ಸಮಿತಿಯ ರಾಜ್ಯ ಸಂಯೋಜಕ ಉಮೇಶ ಆಲಮೇಲಕರ ಹಾಗೂ ಇತರ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕೇಸರಿ ಸಮಿತಿಯ ಕಾರ್ಯವೈಖರಿಯನ್ನು ಪರಿಶೀಲಿಸಿದ ಯತ್ನಾಳ್, ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಲು ಬೇಕಾದ ರೂಪುರೇಷೆಗಳ ಬಗ್ಗೆ ಚರ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ತುರ್ತು ಕಾರ್ಯಚಟುವಟಿಕೆಗಳ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಅಭಿಯಾನದ ಭಾಗವಾಗಿ, ಶೀಘ್ರದಲ್ಲೇ ಯತ್ನಾಳ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇದು ಯತ್ನಾಳ್ ಅವರು ಬಿಜೆಪಿಯ ಚೌಕಟ್ಟನ್ನು ಮೀರಿ ತಮ್ಮದೇ ಆದ ಹಿಂದುತ್ವದ ಪಡೆಯನ್ನು ಕಟ್ಟುತ್ತಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಬಿಜೆಪಿಯಲ್ಲಿ ಭುಗಿಲೆದ್ದ ಯತ್ನಾಳ್ ಪರ ಕೂಗು
ಯತ್ನಾಳ್ ಒಂದು ಕಡೆ ತಮ್ಮದೇ ಸಂಘಟನೆ ಕಟ್ಟುತ್ತಿದ್ದರೆ, ಇತ್ತ ಬಿಜೆಪಿಯಲ್ಲಿ ಅವರನ್ನು ವಾಪಸ್ ಪಕ್ಷಕ್ಕೆ ಕರೆತರಬೇಕೆಂಬ ಕೂಗು ಜೋರಾಗಿದೆ. ಬಾಗಲಕೋಟೆ ಜಿಲ್ಲೆಯ ಮರಕಟ್ಟಿ ಗ್ರಾಮದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲಗೌಡ ಪಾಟೀಲ್ ಅವರು ಯತ್ನಾಳ್ ಪರ ಬಹಿರಂಗವಾಗಿ ಬ್ಯಾಟಿಂಗ್ ಮಾಡಿ, ಪಕ್ಷದ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
'ನಾನು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಅವಲೋಕನ ಸಭೆಯಲ್ಲಿ ನೇರವಾಗಿ ಹೇಳಿ ಬಂದಿದ್ದೇನೆ. ನೀವು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳದಿದ್ದರೆ, ನಿಮಗೆ ಕರ್ನಾಟಕದಲ್ಲಿ ಪಕ್ಷ ಕಟ್ಟಲು ಸಾಧ್ಯವಿಲ್ಲ. ಇದು ನನ್ನ ಸ್ಪಷ್ಟ ನಿಲುವು,' ಎಂದು ಶ್ರೀಶೈಲಗೌಡ ಗುಡುಗಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯತ್ನಾಳ್ ಆಗಬೇಕು: ಬಿಜೆಪಿ ನಾಯಕನ ಆಶಯ
ಶ್ರೀಶೈಲಗೌಡ ಪಾಟೀಲ್ ಅಷ್ಟಕ್ಕೇ ನಿಲ್ಲದೆ, ಯತ್ನಾಳ್ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವಂತೆ ಈಗಾಗಲೇ ರಾಜ್ಯ ನಾಯಕರಿಗೆ ಪತ್ರ ಬರೆದಿರುವುದಾಗಿ ಬಹಿರಂಗಪಡಿಸಿದ್ದಾರೆ. 'ಬರುವ ದಿನಗಳಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವವರಲ್ಲಿ ನಾನು ಮೊದಲಿಗ. ಯತ್ನಾಳ್‌ರಂತಹ ನಾಯಕರು ನಮ್ಮ ಬೆನ್ನಿಗೆ ನಿಂತರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು,' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದುತ್ವ ಉಳಿಯಲು ಯತ್ನಾಳ್ ಬೇಕೇಬೇಕು
ತಮ್ಮನ್ನು 25 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ಎಂದು ಗುರುತಿಸಿಕೊಂಡ ಶ್ರೀಶೈಲಗೌಡ, 'ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಹಿಂದುತ್ವ ಉಳಿಯಬೇಕೆಂದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ದಿಟ್ಟ ನಾಯಕತ್ವ ಬೇಕೇಬೇಕು,' ಎಂದು ಪ್ರತಿಪಾದಿಸಿದ್ದಾರೆ. ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರೊಬ್ಬರಿಂದಲೇ ಇಂತಹ ಹೇಳಿಕೆಗಳು ಹೊರಬಿದ್ದಿರುವುದು, ಯತ್ನಾಳ್ ಅವರ ಪ್ರಭಾವ ಮತ್ತು ಪಕ್ಷದ ಕಾರ್ಯಕರ್ತರ ವಲಯದಲ್ಲಿ ಅವರಿಗಿರುವ ಬೆಂಬಲವನ್ನು ಎತ್ತಿ ತೋರಿಸುತ್ತಿದೆ. ಈ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಯಾವ ರೀತಿಯ ಬದಲಾವಣೆಗಳಿಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Post a Comment