ಡ್ಯ, (ಅಕ್ಟೋಬರ್ 29): ಜೆಡಿಎಸ್ ಹಾಗೂ ಬಿಜೆಪಿ ಮಾಜಿ ದೋಸ್ತಿ ಪಡೆಗೆ ಮಂಡ್ಯದಲ್ಲೇ ಸಚಿವ ಚಲುವರಾಯಸ್ವಾಮಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಎಚ್ಡಿ ಕುಮಾರಸ್ವಾಮಿ ವರು ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯದ ಹಾಲಿ ಸಂಸದರಾಗಿದ್ದರೂ ಸಹ ಜೆಡಿಎಸ್ ಸಮರಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿದೆ.
ಹೌದು…ಮನ್ಮುಲ್ ಬಳಿಕ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಕಾಂಗ್ರೆಸ್, 12 ಸ್ಥಾನಗಳ ಪೈಕಿ 9 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ದಳಪತಿಗಳಿಗೆ ಆಘಾತವಾಗಿದ್ದು, ಭದ್ರಕೋಟೆ ಮಂಡ್ಯದಲ್ಲೇ ಜೆಡಿಎಸ್ ಮಂಕಾಯ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಕಣದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ 9 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್, ಪಿ.ಸಂದರ್ಶ, ಬಿ.ಗಿರೀಶ, ಕೆ.ವಿ.ದಿನೇಶ್, ಹೆಚ್.ಅಶೋಕ, ಎ.ವಿಜೇಂದ್ರಮೂರ್ತಿ ಮತ್ತು ಕೆ.ಸಿ.ಜೋಗಿಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 3 ಸ್ಥಾನಗಳಿಗೆ ನವೆಂಬರ್ 2 ರಂದು ಚುನಾವಣೆ ನಡೆಯಲಿದೆ. ಆದ್ರೆ, ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗೆದ್ದು ಬೀಗಿದ್ದು, ಬ್ಯಾಂಕ್‌ನ ಆಡಳಿತ ಚುಕ್ಕಾಣಿ ಕಾಂಗ್ರೆಸ್ ವಶವಾಗಿದೆ. ಇದರೊಂದಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಂಸದೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ.
ಮಂಡ್ಯ ಡಿಸಿಸಿ ಬ್ಯಾಂಕ್ ಜಿಲ್ಲೆಯ ರೈತರಿಗೆ ಹಣಕಾಸು ಸಹಾಯ ನೀಡುವ ಮುಖ್ಯ ಸಂಸ್ಥೆಯಾಗಿದೆ. ಕಾಂಗ್ರೆಸ್ ಇದನ್ನು ಚುನಾವಣೆಗೂ ಮುನ್ನವೇ ಗೆದ್ದುಕೊಂಡಿದ್ದು, ರಾಜಕೀಯವಾಗಿ ದೊಡ್ಡ ಗೆಲುವು ಎನ್ನಲಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರಿಗೆ ಇದು ಆಘಾತವಾಗಿದೆ.
ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಹಕಾರ ಕ್ಷೇತ್ರದ ಸದಸ್ಯರು, ಕಾರ್ಯಕರ್ತರಿಗೆ ಅಭಿನಂದನೆ. ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ ಇತಿಹಾಸದಲ್ಲೇ 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕರು, ಪಕ್ಷದ ಮುಖಂಡರು ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಜೆಡಿಎಸ್ಗೆ ಬಿಜೆಪಿ ಸಪೋರ್ಟ್ ಇದ್ದರೂ ಜನರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಚುನಾವಣೆ ಗೆದ್ದಾಗ ಹಿಗ್ಗುವುದು, ಸೋತಾಗ ಓಡಿ ಹೋಗುವುದು ಎರಡೂ ತಪ್ಪು. ನಾನು ಯಾವಾಗಲೂ ಹಿಗ್ಗಲ್ಲ, ಅವಕಾಶ ಸಿಕ್ಕಾಗ ಕೆಲಸ ಮಾಡ್ತೇವೆ. ನಾವು ಜೆಡಿಎಸ್ ಮುಗಿಸಲ್ಲ, ನಾನು ಜೆಡಿಎಸ್‌ನಲ್ಲಿದ್ದಾಗಲೂ ನೂರಾರು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೆ. ಕಾಂಗ್ರೆಸ್ ಇವಾಗ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ ಎಂದು ಹೇಳಿದ್ದಾರೆ.

Post a Comment