ಡಿಕೆಶಿ ಸಿಎಂ ಆದ್ರೆ ಕಾಂಗ್ರೆಸ್‌ ಕಚೇರಿಗಳಿಗೆ ದೊಡ್ಡ ಬೀಗ ಬೀಳುತ್ತದೆ: ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ


 ಮಕೂರು/ಬೆಂಗಳೂರು (ಅ.29): 'ಒಂದು ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯದ ಕಾಂಗ್ರೆಸ್‌ ಕಚೇರಿಗಳಿಗೆ ದೊಡ್ಡ ಬೀಗ ಹಾಕಬೇಕಾಗುತ್ತೆ' ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿಕೆಶಿ ಅವರ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗಲಿ, ನನ್ನ ತಕರಾರು ಏನೂ ಇಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಬೇಕು.


ಆದರೆ, ಒಂದು ಮಾತಂತೂ ಸತ್ಯ, ಡಿಕೆಶಿ ಸಿಎಂ ಆದರೆ, ರಾಜ್ಯದ ಕಾಂಗ್ರೆಸ್‌ ಕಚೇರಿಗಳಿಗೆ ದೊಡ್ಡ ಬೀಗ ಹಾಕಬೇಕಾಗುತ್ತೆ ಎಂದು ಮಾರ್ಮಿಕವಾಗಿ ನುಡಿದರು. ಹಿಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಹಾಗೆಂದು ಮುಂದೆ ಸ್ಪರ್ಧಿಸುವುದಿಲ್ಲ ಎಂಬುದು ಯಾವ ಗ್ಯಾರಂಟಿ. ಹಾಗೆಯೇ ಸಿದ್ದರಾಮಯ್ಯ ಅವರಿಗೂ ಒತ್ತಡ ಇದೆ. ಸಿಎಂ ಯಾರು ಆಗಬೇಕು ಎನ್ನುವುದು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಷಯ. ಆದರೆ, ಸಿದ್ದರಾಮಯ್ಯನವರೇ 5 ವರ್ಷವೂ ಮುಖ್ಯಮಂತ್ರಿ ಆಗಿರಬೇಕು ಎಂಬುದು ನನ್ನ ಆಸೆ.


ನ.14ರವರೆಗೂ ಏನೂ ನಡೆಯುವುದಿಲ್ಲ. ಯಾವುದೇ ಬದಲಾವಣೆ ನಡೆಯುವುದಿದ್ದರೂ, ಅದು ಬಿಹಾರ ಚುನಾವಣೆ ಬಳಿಕವೇ ನಡೆಯುತ್ತೆ ಎಂದರು. ಇದೇ ವೇಳೆ, ದಲಿತ ಸಿಎಂ ಕುರಿತು ಮಾತನಾಡಿ, ದಲಿತರು ಮುಖ್ಯಮಂತ್ರಿ ಆಗಿಲ್ಲ ಎನ್ನುವ ಕೂಗು ಮೊದಲಿನಿಂದಲೂ ಇದೆ. ಕಾಂಗ್ರೆಸ್ ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. ಹಾಗೆಂದು ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಲಾಗಲ್ಲ ಎಂದರು.


ಒಬಿಸಿಗೂ ಮೀಸಲಾತಿ ಬೇಕು


ಪರಿಶಿಷ್ಟ ಜಾತಿ-ಪಂಗಡದವರಿಗೆ ಇರುವಂತೆ ಚುನಾವಣೆಗಳಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ದೊರೆಯಬೇಕು. ಆ ಮೂಲಕ ಈ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಹೇಳಿದರು. ಸಮಾಜಕ್ಕೆ ಕೊಡುಗೆ ಕೊಟ್ಟಿರುವ ಎಲ್ಲಾ ದಾರ್ಶನಿಕರ ಜಯಂತಿಯನ್ನು ಒಂದೇ ದಿನ, ಒಂದೇ ವೇದಿಕೆಯಲ್ಲಿ ಆಚರಿಸುವ ಹೊಸ ಸಂಪ್ರದಾಯ ಆರಂಭಿಸಬೇಕು ಎಂದು ಸಲಹೆ ಮಾಡಿದರು. ರಾಜಕೀಯ ಅಧಿಕಾರ ಇಲ್ಲದಿದ್ದರೆ ಸಮಸ್ಯೆಗಳನ್ನು ಪ್ರಸ್ತಾಪ ಮಾಡಲು ಅವಕಾಶ ಸಿಗುವುದಿಲ್ಲ. ರಾಜಕೀಯ ಅಧಿಕಾರ ಇಲ್ಲದ ಸಮುದಾಯಗಳು ರಾಜಕೀಯ ಅಧಿಕಾರ ಹೊಂದಿರುವ ಸಮುದಾಯಗಳ ಮೇಲೆ ಅವಲಂಬಿತವಾಗುವಂತಹ ಪರಿಸ್ಥಿತಿ ಬರುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ರಾಜಕೀಯ ಅಧಿಕಾರವನ್ನು ಯಾರೂ ಕೊಡುವುದಿಲ್ಲ, ನಾವೇ ತೆಗೆದುಕೊಳ್ಳಬೇಕು. ತೆಗೆದುಕೊಳ್ಳಲು ನಾಯಕನ ಬೆನ್ನಿಗೆ ಜನಶಕ್ತಿ ಇರಬೇಕು. ಹೀಗಾಗಿ ಸಂಘಟನೆ ಮುಖ್ಯವಾಗುತ್ತದೆ. ಈಗ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಿಂದುಳಿದ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ಪೂರಕ ಮಾಹಿತಿ ನಮೂದಿಸಬೇಕು. ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

Post a Comment

Previous Post Next Post