ಗಳೂರು : ರಾಜ್ಯ ರಾಜಕೀಯದಲ್ಲಿ ಸೈಲೆಂಟ್ ಆಗಿ ಏನಾದರೂ ಬೆಳವಣಿಗೆ ನಡೆಯುತ್ತಿದೆಯಾ? ಕೆಎನ್ ರಾಜಣ್ಣನವರ ಪುತ್ರ ಸೆಪ್ಟಂಬರ್ ಕ್ರಾಂತಿ ಬಗ್ಗೆ ಆಡಿದ ಮಾತಿನ ಹಿನ್ನಲೆ ಏನು? ಉಪ ಮುಖ್ಯಮಂತ್ರಿಗಳು, ಕಾಂಗ್ರೆಸ್ಸಿಗೆ ಟಾಟಾ ಬೈಬೈ ಹೇಳುವ ಸಾಧ್ಯತೆಯಿದೆಯಾ? ಈ ರೀತಿಯ ಅನುಮಾನ ಬರಲು ಕಾಂಗ್ರೆಸ್ ನಾಯಕರೇ ಕಾರಣರಾಗುತ್ತಿದ್ದಾರೆ.
ಡಿಕೆ ಶಿವಕುಮಾರ್ ಅವರ ಪವರ್ ಶೇರಿಂಗ್ ಹೇಳಿಕೆಯಿಂದ ಆರಂಭವಾಗಿ ಮೊನ್ನೆಮೊನ್ನೆ ಉಡುಪಿಯ ಕಾರ್ಯಕ್ರಮದ ತನಕ, ಡಿಸಿಎಂ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿದ್ದಾರೆ. ಅದರಲ್ಲೂ, ಅವರ ರಾಷ್ಟ್ರೀಯ ಸ್ವಯಂಸೇವಕ ಸಂಘದ 'ನಮಸ್ತೆ ಸದಾ ವತ್ಸಲೇ ಮಾತೃಭೂಮಿ' ಗೀತೆ ಹಾಡಿದ್ದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಇದಕ್ಕೆ ಕ್ಷಮೆಯಾಚಿಸುವಂತಹ ಪರಿಸ್ಥಿತಿ ಉಪ ಮುಖ್ಯಮಂತ್ರಿಗಳಿಗೆ ನಿರ್ಮಾಣವಾಗಿತ್ತು. ಇದಾದ ನಂತರ, ಏನು ಮಾತನಾಡಿದರೂ ತಪ್ಪಾಗುತ್ತದೆ, ಸುಮ್ಮನಿರುವುದೇ ಲೇಸು ಎಂದು ಹೇಳಿದ್ದ ಡಿಸಿಎಂ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಕಾರ್ಯಕ್ರಮವೊಂದರಲ್ಲಿ ಅವರು ನಗುನಗುತ್ತಾ ನೀಡಿದ ಹೇಳಿಕೆ.
ಚಾಮುಂಡಿ ಬೆಟ್ಟದ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ
ಮೈಸೂರು ದಸರಾ ಉದ್ಘಾಟನೆ ಮತ್ತು ಚಾಮುಂಡಿ ಬೆಟ್ಟದ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಡಿದ ಮಾತು ಸಂಚಲನ ಮತ್ತು ಟೀಕೆಗೂ ಕಾರಣವಾಗಿತ್ತು. ಚಾಮುಂಡಿ ಬೆಟ್ಟ, ಹಿಂದೂಗಳ ಆಸ್ತಿಯಲ್ಲ, ಸಾರ್ವಜನಿಕ ಆಸ್ತಿ ಎಂದು ಅವರು ಹೇಳಿದ್ದರು. ಇನ್ನೊಂದು ಕಡೆ, ಸಿಎಂ ಸಿದ್ದರಾಮಯ್ಯ, ಚಾಮುಂಡಿ ಬೆಟ್ಟ, ಹಿಂದೂಗಳದ್ದೇ ಆಗಿರಬಹುದು ಎಂದು ಹೇಳಿದ್ದರು. ಆ ಮೂಲಕ, ಇಬ್ಬರ ನಡುವೆ ಸಂವಹನದ ಕೊರತೆ ಇದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.
ಗಣೇಶನ ಆಶೀರ್ವಾದ ಪಡೆಯಲು ಬಂದಿದ್ದೇನೆ
ಬೆಂಗಳೂರಿನ ಬಸವನಗುಡಿಯ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮತ್ತು ಬಿಡಿಎ ಅಧ್ಯಕ್ಷ ಎನ್‌ಎ ಹ್ಯಾರೀಸ್ ಪಾಲ್ಗೊಂಡಿದ್ದರು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, 'ಬೆಂಗಳೂರಿನ ಜನತೆಗೆ ಇಂದು ಐತಿಹಾಸಿಕ ದಿನ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಎಲ್ಲರಿಗೂ ಗಣೇಶ ಒಳ್ಳೆದನ್ನು ಮಾಡಲಿ. ಗಣೇಶನ ಜೊತೆಗೆ ನಿಮ್ಮ ಆಶೀರ್ವಾದವನ್ನೂ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ್ದಾರೆ. ಇದಾದ ನಂತರ, ಅವರಿಗೆ ಸಣ್ಣ ಸನ್ಮಾನವನ್ನು ಕಾರ್ಯಕ್ರಮದ ಆಯೋಜಕರು ಮಾಡಿದ್ದರು.
ಮೋದಿಯವರನ್ನು ಕೇಳಿ, ಅವರು ಡಿಕೆ ಡಿಕೆ ಅಂತಾರೆ
ಡಿಕೆ ಶಿವಕುಮಾರ್ ಅವರಿಗೆ ಗಾಯಕ ವಿಜಯ್ ಪ್ರಕಾಶ್ ಸನ್ಮಾನವನ್ನು ಮಾಡಿದ್ದಾರೆ. ಆ ವೇಳೆ, ಸಭಿಕರು ಜೋರಾಗಿ, ಮೋದಿ..ಮೋದಿ ಎಂದು ಕೂಗಲು ಆರಂಭಿಸಿದರು. ಆಗ ಆಯೋಜಕರಿಂದ ಮೈಕ್ ತೆಗೆದುಕೊಂಡ ಡಿಕೆಶಿ, "ಬಹಳ ಸಂತೋಷ, ನೀವು ಮೋದಿ.. ಮೋದಿ ಎಂದು ಹೇಳುತ್ತಿದ್ದೀರಿ. ನೀವು ಬೇಕಾದರೆ ಮೋದಿಯವರನ್ನು ಕೇಳಿ, ಅವರು ಡಿಕೆ ಡಿಕೆ ಎಂದು ಹೇಳುತ್ತಾರೆ" ಎಂದು ನಗುನಗುತ್ತಲೇ ಹೇಳಿದ್ದಾರೆ. ಆ ವೇಳೆ, ಸಭಿಕರಿಂದ ಜೋರಾದ ಕರತಾಡನ ವ್ಯಕ್ತವಾಯಿತು.
ಕರ್ನಾಟಕ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾದ ಹೇಳಿಕೆ
ಡಿಕೆ ಶಿವಕುಮಾರ್ ಅವರ ಹೇಳಿಕೆ, ಕರ್ನಾಟಕ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಒಂದು ದಿನದ ಹಿಂದೆ, ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣನವರ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯರೂ ಆಗಿರುವ ಆರ್. ರಾಜೇಂದ್ರ ಅವರು ನೀಡಿದ್ದ ಹೇಳಿಕೆಗೂ, ಡಿಕೆಶಿಯವರ ಮಾತಿಗೂ ಒಂದಕ್ಕೊಂದು ಸಿಂಕ್ ಆಗುತ್ತಾ ಎನ್ನುವ ಚರ್ಚೆ ಆರಂಭವಾಗಿದೆ. ಬೆಳಗ್ಗೆಯೇ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರು ಬಿಜೆಪಿಗೆ ಹೋದರೂ ಆಶ್ಚರ್ಯವಿಲ್ಲ ಎನ್ನುವ ಹೇಳಿಕೆ ಅವರು ನೀಡಿರುವುದು ಈ ಚರ್ಚೆಗೆ ಕಾರಣವಾಗಿದೆ.
ಕೆಎನ್ ರಾಜಣ್ಣ ಹೇಳಿದ ಸೆಪ್ಟಂಬರ್ ಕ್ರಾಂತಿ
ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಮಾತನಾಡುತ್ತಾ, ಕೆಎನ್ ರಾಜಣ್ಣನವರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ ರಾಜೇಂದ್ರ, "ರಾಜಣ್ಣ ವಿಧಾನಸಭೆಯಲ್ಲಿ ಸಂಘದ ಗೀತೆಯನ್ನು ಹಾಡಲಿಲ್ಲ. ಬಾಲ್ಯದಲ್ಲಿ ಆರ್‌ಎಸ್‌ಎಸ್ ಚಡ್ಡಿಯನ್ನು ಹಾಕಿಕೊಂಡಿಲ್ಲ. ಸೆಪ್ಟಂಬರ್ ಬಳಿಕ ಕ್ರಾಂತಿ ಎಂದು ರಾಜಣ್ಣ ಹೇಳಿದ್ದರು. ಇವರೆಲ್ಲಾ (ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರು) ಬಿಜೆಪಿಗೆ ಹೋಗಬಹುದು. ನಮ್ಮ ತಂದೆ ಹೇಳಿದ ಕ್ರಾಂತಿ ಅದೇ, ಸಿಎಂ ಮಾಡುವ ಹಾಗಿದ್ದರೆ, ಬಿಜೆಪಿಗೆ ಹೋಗುತ್ತಾರೆ" ಎಂದು ಆರ್. ರಾಜೇಂದ್ರ ಹೇಳಿದ್ದರು.
ಮೋದಿ, ಡಿಕೆ ಡಿಕೆ ಎನ್ನುತ್ತಿರುತ್ತಾರೆ ಎಂದ ಡಿಕೆ ಶಿವಕುಮಾರ್
ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಕೃತ ಶ್ಲೋಕವನ್ನು ನಿರರ್ಗಳವಾಗಿ ಹೇಳುತ್ತಾ ಡಿಕೆಶಿ ಭಾಷಣ ಮಾಡಿದ್ದರು. ಎಲ್ಲೋ, ಅವರು ಸನಾತನ ಧರ್ಮಕ್ಕೆ ಹತ್ತಿರವಾಗುತ್ತಿದ್ದಾರಾ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಇನ್ನು, ಬೆಂಗಳೂರಿಗೆ ಪ್ರಧಾನಿ ಮೋದಿ ಬಂದಿದ್ದಂತಹ ಸಂದರ್ಭದಲ್ಲಿ ತುಂಬಾ ಆತ್ಮೀಯತೆಯಿಂದ ಅವರ ಜೊತೆಗೆ ಡಿಕೆ ಶಿವಕುಮಾರ್ ಗುರುತಿಸಿಕೊಂಡಿದ್ದರು. ಈಗ, ಗಣೇಶ ಕಾರ್ಯಕ್ರಮದಲ್ಲಿ ಮೋದಿ, ಡಿಕೆ ಡಿಕೆ ಎನ್ನುತ್ತಿರುತ್ತಾರೆ ಎನ್ನುವ ಅವರ ಹೇಳಿಕೆ, ಸ್ವಾಭಾವಿಕವಾಗಿ ಕುತೂಹಲಕ್ಕೆ ಕಾರಣವಾಗಿದೆ.
Post a Comment