ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಒಂದೇ ಒಂದು ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ವಿರೋಧ ಪಕ್ಷಗಳು ಖರ್ಗೆ ಮಾತನ್ನೇ ರಾಜಕೀಯ ಅಸ್ತ್ರ ಮಾಡಿಕೊಂಡ್ರೆ, ಕಾಂಗ್ರೆಸ್ಸಿಗರು ಖರ್ಗೆ ಮಾತಲ್ಲಿ ತಪ್ಪೇನಿಲ್ಲ ಅಂತಾ ಸಮಜಾಯಿಷಿ ಕೊಡ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷಕ್ಕಾಗಿ ದುಡಿದಿದ್ದೇ ನಾನು. ಆದರೆ ಸಿಎಂ ಆಗಿದ್ದು ಎಸ್.ಎಂ. ಕೃಷ್ಣ ಅಂತಾ ಹೇಳಿದ್ರು. ಇದಕ್ಕೆ ಬಿಜೆಪಿಗರು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ಸಿಗರದ್ದು ದಲಿತ ವಿರೋಧಿ ನಡವಳಿಕೆ. ಅಂಬೇಡ್ಕರ್ ಅವರಿಗೆ ಮಾಡಿದಂತೆ, ಖರ್ಗೆ ಅವರಿಗೂ ಮಾಡ್ತಿದ್ದಾರೆ ಅಂತಾ ಟೀಕಿಸಿದ್ರು. ಜೊತೆಗೆ ಖರ್ಗೆಯವರನ್ನು ಸಿಎಂ ಮಾಡಿ ಅಂತಾ, ಯತ್ನಾಳ್ ಸವಾಲು ಹಾಕಿದ್ದಾರೆ.
ಇದಾದ ಬಳಿಕ ಖರ್ಗೆ ಮಾತಿಗೆ ಕಾಂಗ್ರೆಸ್ಸಿಗರು ಸ್ಪಷ್ಟನೆ ಕೊಡಲು ಮುಂದಾಗಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರೋದಾದ್ರೆ, ಅದರಲ್ಲಿ ತಪ್ಪೇನಿಲ್ಲ. ಖರ್ಗೆಯವರ ಬಗ್ಗೆ ಮಾತನಾಡುವ ಹಂತಕ್ಕೆ ಯಾರೂ ಬೆಳೆದಿಲ್ಲ. ಖರ್ಗೆಯವರು ನಮ್ಮ ಪಕ್ಷಕ್ಕಷ್ಟೇ ಅಲ್ಲ. ರಾಷ್ಟ್ರ ರಾಜಕಾರಣದಲ್ಲೂ ಹಿರಿಯ ಮುಖಂಡರು. ಅವರ ಹಿರಿತವನ್ನು ಪರಿಗಣಿಸಬೇಕು. ಅವರ ಹೇಳಿಕೆ ಮೇಲೆ ಟೀಕೆ-ಟಿಪ್ಪಣಿ ಮಾಡೋದು ಸರಿಯಲ್ಲ. ಖರ್ಗೆಯವರು ಎಲ್ಲಾ ಹುದ್ದೆಗಳಿಗೂ ಸಮರ್ಥರು. ಅನುಭವ ಇದೆ. ಸುದೀರ್ಘವಾದ 50 ವರ್ಷಗಳ ರಾಜಕಾರಣ ಮಾಡಿದ್ದಾರೆ. ಅವರು ಏನದ್ರೂ ಹೇಳುವಾಗ ತಪ್ಪಾಗಿ ಭಾವಿಸೋದು ಸರಿ ಇಲ್ಲ. ನಮ್ಮ ಪಕ್ಷದಲ್ಲಿ ಖರ್ಗೆಯವರೇ ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಅನ್ನೋದನ್ನ, ನಿರ್ಧಾರ ಮಾಡೋದೇ ಅವರು ಅಂತಾ ಪರಂ ಹೇಳಿದ್ದಾರೆ.
ಖರ್ಗೆ ಮಾತಿಗೆ ಡಿಸಿಎಂ ಡಿಕೆಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಅವರ ನೋವು, ಭಾವನೆಯನ್ನು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ. ಅವರು ಹಿರಿಯ ನಾಯಕರು. ನಮ್ಮ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರು ಮಾತನಾಡಿರೋದ್ರಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯ ರಾಜಕಾರಣಕ್ಕೆ ಬರುವುದರ ಬಗ್ಗೆ ಮಾತಾಡಿದ್ರಲ್ಲಿ ತಪ್ಪೇನಿದೆ. ಚರ್ಚೆ ಮಾಡೋದ್ರಲ್ಲೂ ತಪ್ಪಿಲ್ಲ. ಅಭಿಪ್ರಾಯ ಹೇಳಿಕೊಳ್ಳುವುದರಲ್ಲೂ ತಪ್ಪಿಲ್ಲ. ಆದ್ರೆ ಪಬ್ಲಿಕ್ ಅಲ್ಲೇ ಎಲ್ಲವನ್ನೂ ಹೇಳಬಾರದು ಅಂತಾ ಡಿಕೆಶಿ ಹೇಳಿದ್ರು.
ಮಾಜಿ ಸಚಿವ ಆರ್.ವಿ. ದೇಶಪಾಂಡೆ ಕೂಡ, ಖರ್ಗೆಯವರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಖರ್ಗೆಯವರು, ಸಿಎಂಗಿಂತ ಉನ್ನತ ಸ್ಥಾನದಲ್ಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ಅಧ್ಯಕ್ಷರು. ಸಿಎಂ ಆಗುವ ಅರ್ಹತೆ, ಯೋಗ್ಯತೆ ಅವರಿಗೆ ಇದೆ. ಎಸ್.ಎಂ. ಕೃಷ್ಣರನ್ನು ಸಿಎಂ ಮಾಡಿದ್ದು, ಹೈಕಮಾಂಡ್ ನಿರ್ಧಾರ ಆಗಿತ್ತು. ಖರ್ಗೆ ಅಧಿಕಾರದ ಹಿಂದೆ ಬಿದ್ದವರಲ್ಲ. ಸದ್ಯ, ಸಿಎಂ ರೇಸ್‌ನಲ್ಲಿ ಇಲ್ಲ ಅಂತಾ ಅವರೇ ಹೇಳಿದ್ದಾರೆ. ಸದ್ಯಕ್ಕೆ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂತಾ, ಸಮಾಜಾಯಿಷಿ ಕೊಟ್ಟಿದ್ದಾರೆ.
ಒಟ್ನಲ್ಲಿ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ, ಸೆಪ್ಟೆಂಬರ್ ಕ್ರಾಂತಿಯ ಬಳಿಕ ಖರ್ಗೆ ಸಿಎಂ ಆಗಬೇಕು ಅನ್ನೋ ಒತ್ತಾಯ ಭಾರೀ ಸದ್ದು ಮಾಡ್ತಿದೆ.
Post a Comment