ಗಳೂರು: ಕ್ಷೇತ್ರ ಮರುವಿಂಗಡಣೆ ವಿಚಾರವನ್ನು ಕೇಂದ್ರ ಸರಕಾರದ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಲು ಕಾಂಗ್ರೆಸ್ ಸಿದ್ಧತೆ ಮಾಡುಕೊಳ್ಳುತ್ತಿದ್ದು, ದಕ್ಷಿಣ ಭಾರತದ ರಾಜ್ಯ ಗಳನ್ನು ಈ ವಿಚಾರದಲ್ಲಿ ಒಂದುಗೂಡಿಸಲು ಕರ್ನಾಟಕವೇ ಮುಂಚೂಣಿಯಲ್ಲಿ ನಿಲ್ಲುವ ಬಗ್ಗೆ ಚಿಂತನೆ ನಡೆಸಿದೆ.
ಈಗಾಗಲೇ ಈ ಬಗ್ಗೆ ಪ್ರಕಟನೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ಷೇತ್ರ ಪುನರ್ವಿಂಗಣೆಯಲ್ಲಿ ಅನ್ಯಾಯವಾದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಕೇಂದ್ರ ಸರಕಾರಕ್ಕೆ ರವಾನಿಸಿದ್ದರು. ಇದೇ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಶನಿವಾರ ಪ್ರತಿಕ್ರಿಯಿಸಿದ್ದು, ಅನ್ಯಾಯ ಮಾಡಲು ಬಿಡಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಅವರ ಮಾತಿನ ಮೇಲೆ ನಿಂತರೆ ಈಗಿರುವಂತೆಯೇ ಇರಲಿದೆ. ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಿದರೆ ದಕ್ಷಿಣ ಭಾರತದ ಜನ ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾರೆ. ಇದಕ್ಕೆ ಮಾಜಿ ಸಂಸದ ಡಿ.ಕೆ. ಸುರೇಶ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಪ್ರತಿಕ್ರಿಯಿಸಿದ್ದು, ನ್ಯಾಯದ ವಿರುದ್ಧ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದಿದ್ದಾರೆ.
ಗಟ್ಟಿ ಧ್ವನಿ ಎತ್ತಲೇಬೇಕು
ಈ ದೇಶ ಕೇವಲ ಗುಜರಾತ್, ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಎಲ್ಲ ರಾಜ್ಯಗಳು ಸಮಾನಾಂತರ ಹಕ್ಕು ಹೊಂದಿವೆ. ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ನೀಡಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು. ಕೇಂದ್ರ ಸರಕಾರ ಪ್ರತೀ ಹಂತದಲ್ಲೂ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಬಲಿಷ್ಠವಾದ ರಾಷ್ಟ್ರ ನಿರ್ಮಾಣ ಮಾಡಬೇಕಾದರೆ ರಾಜ್ಯಗಳಿಗೆ ಶಕ್ತಿ ತುಂಬಬೇಕು. ಆದರೆ, ಕೇಂದ್ರ ಸರಕಾರ ರಾಜ್ಯಗಳ ಮೇಲೆ ಒಂದಲ್ಲ ಒಂದು ರೀತಿ ಕಾನೂನು ಹಾಗೂ ನಿಯಮಗಳನ್ನು ಹೇರುತ್ತಿದೆ ಎಂದರು.

Post a Comment