ಮನೆ ಮೇಲೆ ಬಂಡೆ ಕುಸಿದು ಐವರು ಮಕ್ಕಳು ಸೇರಿ 7 ಮಂದಿ ಸಾವು
ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಿರಂತರ ಮಳೆಯಿಂದಾಗಿ ಮನೆಯೊಂದರ ಮೇಲೆ ಬಂಡೆಯೊಂದು ಬಿದ್ದು ಐವರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ನಾಲ್ಕು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ.
ತಿರುವಣ್ಣಾಮಲೈ: ಫೆಂಗಲ್ ಚಂಡಮಾರುತದಿಂದ (Fengal Cyclone) ಪ್ರವಾಹದ (Flood) ಅಬ್ಬರ ಮುಂದುವರಿದಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇತ್ತೀಚೆಗಷ್ಟೇ ತಮಿಳುನಾಡಿನ (Tamil Nadu) ತಿರುವಣ್ಣಾಮಲೈನಲ್ಲಿ (Tiruvannamalai) ಮನೆ ಮೇಲೆ ಬಂಡೆ ಬಿದ್ದು ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.
ಐವರು ಮಕ್ಕಳು ಸೇರಿ 7 ಮಂದಿ ಸಾವು
ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಿರಂತರ ಮಳೆಯಿಂದಾಗಿ ಮನೆಯೊಂದರ ಮೇಲೆ ಬಂಡೆಯೊಂದು ಬಿದ್ದು ಐವರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ನಾಲ್ಕು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ. ದುರಂತದ ಸುದ್ದಿ ತಿಳಿದ ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ
ತಮಿಳುನಾಡಿನಲ್ಲಿ ಚಂಡಮಾರುತದ ಪರಿಣಾಮದಿಂದಾಗಿ ಭಾರೀ ಮಳೆಯಾಗುತ್ತಿದ್ದು, ಹಲವಾರು ರೈಲುಗಳು ಮತ್ತು ವಿಮಾನಗಳ ಹಾರಾಟ ವಿಳಂಬಕ್ಕೆ ಕಾರಣವಾಗಿದೆ. ವಿಲ್ಲುಪುರಂ ಮೂಲಕ ಹಾದುಹೋಗುವ ಸುಮಾರು 48 ರೈಲುಗಳು ಸಂಜೆಯವರೆಗೆ ವಿಳಂಬಗೊಂಡವು ಮತ್ತು ಭೂಕುಸಿತದಿಂದಾಗಿ ಯೆರ್ವಾಡ್‌ಗೆ ಸಾರಿಗೆ ಸೇವೆಗಳು ಸ್ಥಗಿತಗೊಂಡಿವೆ. ಕೊಯಮತ್ತೂರು ಮತ್ತು ನೀಲಗಿರಿಯಲ್ಲಿ ಮಂಗಳವಾರದವರೆಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದ್ದು, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ ಮತ್ತು ಚೆಂಗಲ್‌ಪೆಟ್ಟುಗಳಲ್ಲಿ ಭಾರೀ ಮಳೆಯಾಗಿದೆ. ವಿಲ್ಲುಪುರಂ, ಕಡಲೂರು, ಕಲ್ಲಕುರಿಚಿ ಮತ್ತು ತಿರುವಣ್ಣಾಮಲೈನಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಕೇಂದ್ರದ ನೆರವು ಕೋರಿದ ಸಿಎಂ ಸ್ಟಾಲಿನ್
ಫೆಂಗಲ್ ಚಂಡಮಾರುತವು ರಾಜ್ಯದ ಹಲವೆಡೆ ಭಾರೀ ಹಾನಿಯನ್ನುಂಟು ಮಾಡಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ ಮತ್ತು ಹಾನಿಯನ್ನು ಎದುರಿಸಲು ಹೆಚ್ಚಿನ ಹಣ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ‘ಫೆಂಗಲ್ ಚಂಡಮಾರುತವು ತಮಿಳುನಾಡಿನ 14 ಜಿಲ್ಲೆಗಳಲ್ಲಿ ಹೆಚ್ಚು ಹಾನಿಯನ್ನುಂಟುಮಾಡಿದೆ. 1.5 ಕೋಟಿ ಜನರ ಮೇಲೆ ಪರಿಣಾಮ ಬೀರಿದ್ದು, 2.11 ಲಕ್ಷ ಹೆಕ್ಟೇರ್ ಕೃಷಿಭೂಮಿಯನ್ನು ಮುಳುಗಿಸಿದ್ದಲ್ಲದೆ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ವಿನಾಶದ ಪ್ರಮಾಣವನ್ನು ಗಮನಿಸಿದರೆ, ತುರ್ತು ಮರುಸ್ಥಾಪನೆ ಮತ್ತು ಪುನರ್ವಸತಿ ಪ್ರಯತ್ನಗಳಿಗೆ ಸಹಾಯ ಮಾಡಲು ತಕ್ಷಣವೇ ಎನ್‌ಡಿಆರ್‌ಎಫ್‌ನಿಂದ 2,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ’ ಎಂದು ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಫೆಂಗಲ್ ಚಂಡಮಾರುತದಿಂದ ಉಂಟಾದ ವಿನಾಶ ಮತ್ತು ಪ್ರವಾಹದ ನಡುವೆ, ಎಂಕೆ ಸ್ಟಾಲಿನ್ ಅವರು ವಿಲುಪುರಂ ಮತ್ತು ಕಲ್ಲಕುರಿಚಿ ಜಿಲ್ಲೆಗಳಿಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಜನರಿಗೆ ನೆರವು ನೀಡುವುದಾಗಿ ಹೇಳಿದ್ದಾರೆ. ತಮಿಳುನಾಡು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಎಂ ಆರ್ ಕೆ ಪನ್ನೀರ್ಸೆಲ್ವಂ ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ಸಿಎಂ ಸ್ಟಾಲಿನ್ ಮಾಹಿತಿ ನೀಡಿದ್ದಾರೆ. ರಾಜ್ಯ ಲೋಕೋಪಯೋಗಿ ಸಚಿವ ಇ ವಿ ವೇಲು ಅವರನ್ನೂ ಸಂಪರ್ಕಿಸಿ ತಿರುವಣ್ಣಾಮಲೈ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದೇನೆ ಎಂದು ಸಿಎಂ ಹೇಳಿದರು.

Post a Comment