MUDA Scam: ಲೋಕಾಯುಕ್ತರ ಮೇಲೆ ನಂಬಿಕೆ ಇಲ್ಲ, ನ್ಯಾಯ ಸಿಗದಿದ್ದರೆ ಕೋರ್ಟ್‌ಗೆ ಹೋಗ್ತೀನಿ; ದೂರುದಾರ ಸ್ನೇಹಮಯಿ ಕೃಷ್ಣ ಎಚ್ಚರಿಕೆ


 ಸ್ನೇಹಮಯಿ ಕೃಷ್ಣ ಹಾಗೂ ಸಿಎಂ ಸಿದ್ದರಾಮಯ್ಯ

Muda scam: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್‌ ನೀಡಿದೆ. ಈ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, ನನಗೆ ನ್ಯಾಯ ಸಿಗದಿದ್ದರೆ ನಾನು ಕೋರ್ಟ್‌ಗೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರು: ರಾಜ್ಯದಲ್ಲಿ ಮುಡಾ ಹಗರಣ (Muda Scam) ಪ್ರಕರಣಕ್ಕೆ ಇದೀಗ ಟ್ವಿಸ್ಟ್‌ ಸಿಕ್ಕಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಲೋಕಾಯುಕ್ತ (Lokayukta) ನೋಟಿಸ್ ಜಾರಿ ಮಾಡಿದೆ. ಈ ಹಿಂದೆ ಲೋಕಾಯುಕ್ತವು ಉಳಿದ ಆರೋಪಿಗಳ ವಿಚಾರಣೆ ನಡೆಸಿತ್ತು. ಇದೀಗ ಎ1 ಆರೋಪಿ ಸಿಎಂ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ. ಈ ಸಂಬಂಧ ನ್ಯೂಸ್ 18ಗೆ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ನ್ಯಾಯ ಸಿಗದಿದ್ದರೆ ನಾನು ಕೋರ್ಟ್‌ಗೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್‌ ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ಮುಡಾ ಹಗರಣ ಸಂಬಂಧ ನನ್ನ ಬಳಿ ಇರುವ ಸಾಕ್ಷ್ಯಗಳನ್ನ ನಾನು ನೀಡಿದ್ದೇನೆ.  ಆ ಸಾಕ್ಷ್ಯಗಳ ಆಧಾರದ ಮೇಲೆ ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಆಗಬಹುದು ಎಂದು ನಂಬಿದ್ದೇನೆ. ಆದರೆ ನನಗೆ ಮೊದಲಿನಿಂದಲೂ ಕೂಡ ಲೋಕಾಯುಕ್ತದ ಮೇಲೆ ನಂಬಿಕೆ ಇಲ್ಲ. ಈಗ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ನಾನು ಅರ್ಜಿ ಸಲ್ಲಿಸಿರುವೆ. ನ್ಯಾಯಾಲಯ ಈ ವಾರದ ಒಳಗೆ ಸಿಬಿಐಗೆ ವಹಿಸಬಹುದು. ನನಗೆ ಲೋಕಾಯುಕ್ತದಲ್ಲಿ ನ್ಯಾಯ ಸಿಗದೆ‌ ಇದ್ದರೆ ನ್ಯಾಯಾಲಯಕ್ಕೆ ಹೋಗ್ತೀನಿ.  ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸ್ತೀನಿ ಎಂದು ಅವರು ಹೇಳಿದ್ದಾರೆ.

ಕಾನೂನಿನ ಮುಂದೆ ಎಲ್ಲರೂ ಒಂದೇ

ಮುಡಾ ಹಗರಣ ಸಂಬಂಧ ನಾನು ಆರಂಭದಿಂದಲೂ ತನಿಖೆಗೆ ಒತ್ತಾಯ ಮಾಡುತ್ತಲೆ ಬಂದಿದ್ದೇನೆ. ಕೊನೆಗೂ ಸಿದ್ದರಾಮಯ್ಯ ಅವರ ವಿಚಾರಣೆ ನಡೆಸುತ್ತಿರುವುದು ನನಗೆ ಖುಷಿ ತಂದಿದೆ. ನಾನು ಲೋಕಾಯುಕ್ತ ಅಧಿಕಾರಿಗಳಿಗೆ 50 ಪ್ರಶ್ನೆಗಳ ಮನವಿ ಪತ್ರ ನೀಡಿರುವೆ. ಆ ಮನವಿ ಪತ್ರದಲ್ಲಿರುವ ಪ್ರಶ್ನೆಗಳು ತನಿಖೆಗೆ ಪೂರಕವಾಗಲಿವೆ. ಆ ಪ್ರಶ್ನೆಗಳಿಗೆ ಈಗ ಲೋಕಾಯುಕ್ತ ಅಧಿಕಾರಿಗಳು ಉತ್ತರ ಪಡೆದುಕೊಳ್ಳಬಹುದು. ಇನ್ನು ಅದರ ಜೊತೆಗೆ ತನಿಖಾಧಿಕಾರಿಗಳು ಕೂಡ ಹಲವು ಪ್ರಶ್ನೆಗಳನ್ನ ಕೇಳಬಹುದು ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.ಸಿಎಂಗೆ ಲೋಕಾಯುಕ್ತ ನೋಟಿಸ್!

ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ನವೆಂಬರ್ 6 ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರ್ ಆಗುವಂತೆ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರಿಂದ ನೋಟಿಸ್ ಜಾರಿ ಮಾಡಲಾಗಿದೆ. ಮುಡಾ 50:50 ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ A2,A3,A4 ವಿಚಾರಣೆ ನಡೆಸಲಾಗಿದೆ. ಕಳೆದ ವಾರ A2 ಸಿಎಂ ಪತ್ನಿ ಪಾರ್ವತಿ ವಿಚಾರಣೆ ಮುಕ್ತಾಯಗೊಂಡಿದೆ. ಇದೀಗ A1 ಆರೋಪಿ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಮಾಡಲಾಗಿದೆ. ಖುದ್ದು ಲೋಕಾಯುಕ್ತ ಎದುರು ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಮುಡಾ ಬೆಳಕಿಗೆ ಬಂದ ಹಾದಿ

ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕೆ.ವಿ. ರಾಜೇಂದ್ರ ಅವರು ಇಡೀ ಮುಡಾ ಹಗರಣವನ್ನು ಹೊರಗೆಡವಿದ್ದರು. ಮುಡಾ ಲೇಔಟ್ ಯೋಜನೆಗಳಲ್ಲಿ ಆಗಿರಬಹುದಾದ ಅಕ್ರಮಗಳ ಬಗ್ಗೆ ಮೊದಲು ರಾಜೇಂದ್ರ ಅವರೇ, ಕಳೆದ ಒಂದು ವರ್ಷದಿಂದ ಮುಡಾ ಆಯುಕ್ತರಿಗೆ ಪತ್ರ ಬರೆದು ವಿವರಣೆ ಕೋರಿದ್ದರು. ಸುಮಾರು 15 ಪತ್ರಗಳನ್ನು ಬರೆದಿದ್ದರೂ ಮುಡಾ ಆಯುಕ್ತರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಮುಡಾ ಹಗರಣ ಬಹಿರಂಗವಾಗುತ್ತಿದ್ದಂತೆ ಜಿಲ್ಲಾಧಿಕಾರಿಯನ್ನೇ ಸರ್ಕಾರ ಎತ್ತಂಗಡಿ ಮಾಡಿ ಆದೇಶ ಹೊರಡಿಸಿತು. ಇದೇ ಈ ಹಗರಣ ತನಿಖೆಯಲ್ಲಿ ಬಹು ಮುಖ್ಯವಾದ ಅಂಶವಾಗಿದೆ.

Post a Comment

Previous Post Next Post