ಮದರಸಾ ಬೋರ್ಡ್ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮದರಸಾ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಎಂದು ಹೇಳಿದೆ.
ನವದೆಹಲಿ: 2004ರ ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿ ಕಾಯ್ದೆಯನ್ನು (Uttar Pradesh Board of Madrasa Education Act) ಅಸಂವಿಧಾನಿಕ ಎಂದು ಘೋಷಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಪ್ರಕಟಿಸಿದೆ. ತನ್ನ ಆದೇಶದಲ್ಲಿ, ನ್ಯಾಯಾಲಯವು ಕಾನೂನನ್ನು “ಸಾಂವಿಧಾನಿಕ” (Constitutional) ಎಂದು ಎತ್ತಿಹಿಡಿದಿದೆ ಮತ್ತು ಈ ಕಾಯಿದೆಯಡಿಯಲ್ಲಿ ನಡೆಯುತ್ತಿರುವ ಮದರಸಾಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ ಎಂದು ಸ್ಪಷ್ಟಪಡಿಸಿತು.
‘ಯುಪಿ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್‌ನ ಶಾಸಕಾಂಗ ಯೋಜನೆಯು ಮದರಸಾಗಳಲ್ಲಿ ಸೂಚಿಸಲಾದ ಶಿಕ್ಷಣದ ಮಟ್ಟವನ್ನು ಪ್ರಮಾಣೀಕರಿಸುವುದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಮೂಲ ರಚನೆಯನ್ನು ಅಂದರೆ ಜಾತ್ಯತೀತತೆಯ ತತ್ವವನ್ನು ಉಲ್ಲಂಘಿಸಿದ್ದಕ್ಕಾಗಿ ಯುಪಿ ಮದರಸಾ ಕಾನೂನನ್ನು ರದ್ದುಗೊಳಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತಪ್ಪಾಗಿ ಹೇಳಿದೆ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.ಅಸಂವಿಧಾನಿಕ ಎಂದಿದ್ದ ಅಲಹಾಬಾದ್ ಹೈಕೋರ್ಟ್
ಈ ವರ್ಷದ ಮಾರ್ಚ್‌ನಲ್ಲಿಯೇ ಅಲಹಾಬಾದ್ ಹೈಕೋರ್ಟ್ ಮದರಸಾ ಬೋರ್ಡ್ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿತ್ತು. ಹೈಕೋರ್ಟ್‌ನ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಅಕ್ಟೋಬರ್ 22 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಂಡ ನಂತರ ನಿರ್ಧಾರವನ್ನು ಕಾಯ್ದಿರಿಸಲಾಗಿತ್ತು. ಮಾರ್ಚ್ 22 ರಂದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಯುಪಿ ಮದರಸಾ ಬೋರ್ಡ್ ಕಾಯಿದೆಯನ್ನು ಅಸಂವಿಧಾನಿಕ ಎಂದು ಘೋಷಿಸಿತು ಮತ್ತು ಎಲ್ಲಾ ವಿದ್ಯಾರ್ಥಿಗಳನ್ನು ಸಾಮಾನ್ಯ ಶಾಲೆಗಳಲ್ಲಿ ಸೇರಿಸಲು ಆದೇಶಿಸಿತ್ತು.
ಹೈಕೋರ್ಟ್ ತೀರ್ಪಿಗೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್
ಈ ಆದೇಶದ ವಿರುದ್ಧ ಮದರಸಾ ನಿರ್ವಾಹಕರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಏಪ್ರಿಲ್ 5 ರಂದು, ಸಿಜೆಐ ನೇತೃತ್ವದ ಪೀಠವು 2004ರ ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಶಿಕ್ಷಣ ಕಾಯ್ದೆಯನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡುವ ಮೂಲಕ ಸುಮಾರು 17 ಲಕ್ಷ ಮದರಸಾ ವಿದ್ಯಾರ್ಥಿಗಳಿಗೆ ರಿಲೀಫ್ ಕೊಟ್ಟಿದ್ದರು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ನಂತರ ಪ್ರಕರಣವನ್ನು ವಿವರವಾಗಿ ಆಲಿಸಿ ಅಕ್ಟೋಬರ್ 22 ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಮದರಸಾ ಮಂಡಳಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಪರವಾಗಿ ಇಲ್ಲ ಎಂದು ರಾಜ್ಯ ಸರ್ಕಾರವು ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಯುಪಿ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಮದರಸಾ ಕಾಯ್ದೆಯ ಕೆಲವು ಭಾಗಗಳನ್ನು ಪರಿಶೀಲಿಸಬಹುದು ಎಂದು ರಾಜ್ಯ ಸರ್ಕಾರವೂ ಹೈಕೋರ್ಟ್‌ನಲ್ಲಿ ಹೇಳಿತ್ತು, ಆದರೆ ಸಂಪೂರ್ಣ ಕಾಯ್ದೆಯನ್ನು ತಿರಸ್ಕರಿಸುವುದಿಲ್ಲ ಎಂದು ಹೇಳಿದ್ದರು.

Post a Comment