ಶೋಭಾ ಕರಂದ್ಲಾಜೆ ಬೆಳಗಾವಿಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಎಫ್‌ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಹೆಸರು ಪ್ರಸ್ತಾಪ ಹಿನ್ನೆಲೆ ಸಿಎಂ ಹಾಗೂ ಲಕ್ಷ್ಮೀ ಹೆಬ್ಬಾಳಕರ ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ವಿಜಯಪುರ: ರಾಜ್ಯದಲ್ಲಿ ಸರಕಾರಿ ನೌಕರರ ಆತ್ಮಹತ್ಯೆ (Suicide) ಪ್ರಕರಣ ಹೆಚ್ಚುತ್ತಿದೆ. ಇಂದು ಬೆಳಗಾವಿಯ (Belagavi) ತಹಶೀಲ್ದಾರ್ ಕಚೇರಿಯಲ್ಲಿ ಎಫ್‌ಡಿಎ ರುದ್ರಣ್ಣ ಯಡವಣ್ಣನವರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ರುದ್ರಣ್ಣ ಡೆತ್‌ನೋಟ್ (Death Note) ಬರೆದಿಟ್ಟಿದ್ದಾರೆ, ಇನ್ನು ಡೆತ್‌ನೋಟ್‌ನಲ್ಲಿ ರುದ್ರಣ್ಣ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ಪಿಎ ಸೋಮು ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಈ ಸಂಬಂಧ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ.
ಬೆಳಗಾವಿಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಎಫ್‌ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಹೆಸರು ಪ್ರಸ್ತಾಪ ಹಿನ್ನೆಲೆ ಸಿಎಂ ಹಾಗೂ ಲಕ್ಷ್ಮೀ ಹೆಬ್ಬಾಳಕರ ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಈ ಸಂಬಂಧ ವಿಜಯಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಹೆಬ್ಬಾಳ್ಕರ್ ಕಮಿಷನ್ ಅಂಗಡಿ!
ಕಾಂಗ್ರೆಸ್ ಸರ್ಕಾರದಲ್ಲಿ ಇದು ಹೊಸದೇನಲ್ಲ. ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮುಡಾ ಪ್ರಕರಣ ಹೊರಗೆ ಬಂತು. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ, ಬೆಂಗಳೂರು, ಉಡುಪಿಯಲ್ಲೂ ಕಮೀಷನ್ ಅಂಗಡಿ ತೆರೆದಿದ್ದಾರೆ. ಇಂದು ತಹಶೀಲ್ದಾರ್ ಕಚೇರಿಯಲ್ಲಿ ಎಫ್‌ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಮೆನ್ಷನ್ ಮಾಡಿದ್ದಾರೆ. ಪಿಎ ಹೆಸರು ಬಂದಿದೆ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳಲು ಸಚಿವರ ಒತ್ತಡ ಇದ್ದೇ ಇರುತ್ತೆ. ಆದ್ದರಿಂದ ಈ ತಕ್ಷಣವೇ ಪಿಎ ಸೋಮು ಬಂಧನ ಮಾಡಬೇಕು, ವಿಚಾರಣೆ, ಮಂಪರು ಪರೀಕ್ಷೆ ಮಾಡಬೇಕು. ಆಗ ಲಕ್ಷ್ಮೀ ಹೆಬ್ಬಾಳಕರ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಅನ್ನೋದು ಹೊರಗೆ ಬರುತ್ತೆ ಎಂದು ಶೋಭಾ ಕರಂದ್ಲಾಜೆ ಹೆಬ್ಬಾಳ್ಕರ್ ವಿರುದ್ಧ ಗುಡುಗಿದ್ದಾರೆ.
ಹೆಬ್ಬಾಳ್ಕರ್ ರಾಜೀನಾಮೆಗೆ ಒತ್ತಾಯ
ತಹಶೀಲ್ದಾರ್ ಕಚೇರಿಯಲ್ಲಿ ಎಫ್‌ಡಿಸಿ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟ ವಿಚಾರಕ್ಕೆ ಸಂಬಂಧಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಹಳಷ್ಟು ದೂರುಗಳಿವೆ. ಹೆಬ್ಬಾಳ್ಕರ್ ಭ್ರಷ್ಟಾಚಾರದ ತುತ್ತ ತುದಿಯಲ್ಲಿದ್ದಾರೆ. ಹಿಂದೆ ಮಾಡಿದ ಪಾಪದ ಫಲ ಅವರನ್ನು ಕಾಡುತ್ತಿದೆ. ಈ ಹಿಂದೆ ಈಶ್ವರಪ್ಪ ರಾಜೀನಾಮೆ ಕೊಡುವಂತೆ ಒತ್ತಾಯ ಮಾಡಿದ್ದರು. ಇದೀಗ ಅವರ ಪಾಪದ ಕೊಡ ತುಂಬಿ ಬೆನ್ನು ಹತ್ತಿದೆ. ಇನ್ನು ಬೆಳಗಾವಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಐದು ಆರು ಸಾವಿರ ಸರಕಾರಿ ಕೆಲಸಕ್ಕೂ ಲಂಚ ಕೊಡಬೇಕಿದೆ. ಇದೀಗ ಎಫ್‌ಡಿಸಿ ರುದ್ರಣ್ಣ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿರೋದಕ್ಕೆ ಹೆಬ್ಬಾಳ್ಕರ್ ನೇರ ಹೊಣೆ ಆಗುತ್ತಾರೆ. ಪಿಎಯಿಂದ ಪಡೆದ ಹಣ ಮಂತ್ರಿಗಳಿಗೆ ಹೋಗುತ್ತೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೊಡಲೇಬೇಕು ಎಂದು ಯತ್ನಾಳ್ ಹೇಳಿದ್ದಾರೆ.

Post a Comment