ರಾಹುಲ್ ಗಾಂಧಿ
ನನ್ನ ಹೆಸರು ಸಾವರ್ಕರ್ ಅಲ್ಲ. ನನ್ನ ಹೆಸರು ಗಾಂಧಿ ಮತ್ತು ಗಾಂಧಿ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ ಎಂದಿದ್ದರು.
ಮುಂಬೈ: ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi)ಒಂದಿಲ್ಲೊಂದು ಹೇಳಿಕೆಯಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ರಾಹುಲ್ ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್ (Vinayak Damodar Savarkar) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಅದೀಗ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಇದೀಗ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ (Maharashtra) ನಾಸಿಕ್ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ನಾಸಿಕ್‌ನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್, ದೀಪಾಲಿ ಪರಿಮಳ್ ಕಡುಸ್ಕರ್ ಅವರು, ಸೆಪ್ಟೆಂಬರ್ 27 ರಂದು ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ್ದು, ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ. ರಾಹುಲ್ ಗಾಂಧಿ ಅವರು ಸಾವರ್ಕರ್ ಅವರ ಪ್ರತಿಷ್ಠೆಗೆ ಧಕ್ಕೆ ತಂದಿದ್ದು, ಈ ಸಂಬಂಧ ಎನ್‌ಜಿಒವೊಂದರ ನಿರ್ದೇಶಕರಾಗಿರುವ ದೂರುದಾರರು ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ. ತಾನು ರಾಹುಲ್ ಗಾಂಧಿಯವರು ನಡೆಸಿದ ಪತ್ರಿಕಾಗೋಷ್ಠಿ ಮತ್ತು ನವೆಂಬರ್ 2022 ರಲ್ಲಿ ಕಾಂಗ್ರೆಸ್ ನಾಯಕ ಮಾಡಿದ ಭಾಷಣವನ್ನು ವೀಕ್ಷಿಸಿದ್ದೇನೆ ಎಂದು ದೂರುದಾರರು ಹೇಳಿದ್ದಾರೆ.
ಪ್ರಕರಣದ ವಿಚಾರಣೆಗೆ ರಾಹುಲ್ ಗಾಂಧಿ ಹಾಜರಾತಿಗೆ ಆದೇಶ ಬಂದಿಲ್ಲ
ಪ್ರಕರಣದ ಮುಂದಿನ ವಿಚಾರಣೆಯಂದು ರಾಹುಲ್ ಗಾಂಧಿ ಖುದ್ದು ಹಾಜರಾಗಬೇಕು ಎಂದು ಇಲ್ಲಿಯವರೆಗೆ ಯಾವುದೇ ಆದೇಶ ಹೊರಡಿಸಲಿಲ್ಲ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 504 ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ವಿಚಾರಣೆ ನಡೆಸಲು ಅವಕಾಶವಿದೆ ಎಂದು ನ್ಯಾಯಾಲಯವು ತಿಳಿಸಿದೆ.
ಏನಿದು ಪ್ರಕರಣ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2022ರ ನವೆಂಬರ್‌ನಲ್ಲಿ ಪತ್ರಿಕಾಗೋಷ್ಠಿವೊಂದರಲ್ಲಿ ಮಾತನಾಡಿರುವುದು ಈಗ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮಾತನಾಡುವ ಭರದಲ್ಲಿ ‘ನನ್ನ ಹೆಸರು ಸಾವರ್ಕರ್ ಅಲ್ಲ. ನನ್ನ ಹೆಸರು ಗಾಂಧಿ ಮತ್ತು ಗಾಂಧಿ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಅಲ್ಲದೆ, ಕ್ಷಮಾದಾನ ಕೋರಿ ಪತ್ರವನ್ನೂ ಬರೆದಿದ್ದರು’ ಎಂದು ಹೇಳಿಕೆ ನೀಡುವುದರ ಮೂಲಕ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಹುಲ್ ಹೇಳಿಕೆಗೆ ತೀವ್ರ ಆಕ್ಷೇಪ
ರಾಹುಲ್ ನೀಡಿದ ಈ ಹೇಳಿಕೆಯನ್ನು ಎನ್‌ಜಿಒವೊಂದರ ನಿರ್ದೇಶಕರಾಗಿರುವ ದೂರುದಾರರು ಆಕ್ಷೇಪಿಸಿದ್ದು, ಗಾಂಧಿ ಅವರು ಎರಡು ಸಂದರ್ಭಗಳಲ್ಲಿ ಸಾವರ್ಕರ್ ಅವರ ಪ್ರತಿಷ್ಠೆಗೆ ಧಕ್ಕೆ ತರುವ ಮೂಲಕ ಸಮಾಜದಲ್ಲಿ ಅವರ ಪ್ರತಿಷ್ಠೆಯನ್ನು ದೂಷಿಸಲು ಪ್ರಯತ್ನಿಸಿದ್ದಾರೆ ಎಂದು ತೀವ್ರವಾಗಿ ಆರೋಪಿಸಿದ್ದಾರೆ. ಹಾಗೆಯೇ ಈ ವೇಳೆ ರಾಹುಲ್ ಸಾವರ್ಕರ್ ಅವರು ‘ಬಿಜೆಪಿ ಮತ್ತು ಆರ್‌ಎಸ್ಎಸ್ ವಂಶಾವಳಿ’ ಎಂದು ಹೇಳಿದ್ದಾರೆ. ಇದು ಸರಿಯಲ್ಲ ಎಂದು ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಯುವ ನಾಯಕನ ಹೇಳಿಕೆಗೆ ಬಿಜೆಪಿ ವಿರೋಧ
ರಾಹುಲ್‌ಗಾಂಧಿ ಅವರ ಈ ಹೇಳಿಕೆ ಅವರನ್ನು ತುಂಬಾ ಸಂಕಷ್ಟಕ್ಕೆ ಸಿಲುಕಿಸಿದೆ. ಇದೀಗ ರಾಹುಲ್ ವಿರೋಧ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹೇಳಿಕೆ ಅವರ ಸ್ಥಾನಕ್ಕೆ ಗೌರವ ನೀಡುವುದಿಲ್ಲ. ಕಾಂಗ್ರೆಸ್ ಹಿರಿಯ ನಾಯಕರು ಇದನ್ನು ಗಂಭೀರವಾಗಿ ಸ್ವೀಕರಿಸಬೇಕು. ಕಾಂಗ್ರೆಸ್ ಹೈಕಮಾಂಡ್ ರಾಹುಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

Post a Comment