Ganesha Chaturthi 2024: ಗಣೇಶನ ಪ್ರಸಾದ ತಯಾರಿಸೋಕೂ ರೂಲ್ಸ್! ಪರ್ಮಿಷನ್ ಇಲ್ಲದೇ ಹಂಚಿದ್ರೆ ಕಠಿಣ ಕ್ರಮ


 ಸಾಂದರ್ಭಿಕ ಚಿತ್ರ

 ಈ ಬಾರಿ ನೀವು ನಿಮ್ಮ ಮನೆ ಅಕ್ಕ-ಪಕ್ಕ, ನಿಮ್ಮ ಬೀದಿಗಳಲ್ಲಿ, ನಿಮ್ಮ ಊರಿನಲ್ಲಿ ಸಾರ್ವಜನಿಕ ಗಣೇಶ ಕೂರಿಸಬೇಕು ಅಂತಾ ಪ್ಲಾನ್ ಮಾಡಿದ್ರಾ? ಹಾಗಾದ್ರೆ ಅಲ್ಲಿ ಪ್ರಸಾದ (Prasad) ತಯಾರಿಸಿ, ಭಕ್ತರಿಗೆ (Devotees) ಹಂಚೋದಕ್ಕೂ ಕೆಲವೊಂದಿಷ್ಟು ರೂಲ್ಸ್ ಇದೆ!

ಬೆಂಗಳೂರು: ಗಣೇಶ ಚತುರ್ಥಿ (Ganesha Chaturthi 2024) ಸಮೀಪಿಸುತ್ತಿದೆ. ಬೆಂಗಳೂರು (Bengaluru) ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ, ಅಷ್ಟೇ ಅಲ್ಲ ದೇಶಾದ್ಯಂತ ಗಣೇಶನನ್ನು ಕೂರಿಸಲು, ಭಕ್ತಿಯಿಂದ ಪೂಜಿಸಲು ಸಕಲ ತಯಾರಿ ನಡೆಯುತ್ತಿದೆ. ಈ ಬಾರಿ ನೀವು ನಿಮ್ಮ ಮನೆ ಅಕ್ಕ-ಪಕ್ಕ, ನಿಮ್ಮ ಬೀದಿಗಳಲ್ಲಿ, ನಿಮ್ಮ ಊರಿನಲ್ಲಿ ಸಾರ್ವಜನಿಕ ಗಣೇಶ ಕೂರಿಸಬೇಕು ಅಂತಾ ಪ್ಲಾನ್ ಮಾಡಿದ್ರಾ? ಹಾಗಾದ್ರೆ ಅಲ್ಲಿ ಪ್ರಸಾದ (Prasad) ತಯಾರಿಸಿ, ಭಕ್ತರಿಗೆ (Devotees) ಹಂಚೋದಕ್ಕೂ ಕೆಲವೊಂದಿಷ್ಟು ರೂಲ್ಸ್ ಇದೆ! ಹೌದು, ಸಾರ್ವಜನಿಕ ಗಣೇಶೋತ್ಸವದಲ್ಲಿ (public Ganeshotsava) ಪ್ರಸಾದ ತಯಾರಿಸಿ ಹಂಚೋದಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (Food Safety and Quality Department) ಸ್ಟ್ರಿಕ್ಟ್ ರೂಲ್ಸ್ ತಂದಿದೆ. ಗಣೇಶ ಪೆಂಡಾಲ್‌ಗಳಲ್ಲಿ ಪ್ರಸಾದ ತಯಾರಿಸೋ ವ್ಯಕ್ತಿ ಅಥವಾ ಸಂಸ್ಥೆಗಳು FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ)ದಿಂದ ಪರವಾನಗಿ ಪಡೆದಿರಬೇಕು ಅಂತ ಆದೇಶಿಸಿದೆ.

 ಗಣೇಶೋತ್ಸವದಲ್ಲಿ ಪ್ರಸಾದ ತಯಾರಿಕೆಗೆ ರೂಲ್ಸ್

ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರಸಾದ ತಯಾರಿಸಿ, ಭಕ್ತರಿಗೆ ಹಂಚಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ. ಪ್ರಸಾದ ತಯಾರಿಸುವ ಸಂಸ್ಥೆ ಅಥವಾ ವ್ಯಕ್ತಿಗಳು ಎಫ್‌ಎಸ್‌ಎಸ್‌ಎಐನಿಂದ ಪರವಾನಗಿ ಪಡೆದಿರಬೇಕು ಅಂತ ಇಲಾಖೆ ತಿಳಿಸಿದೆ.

ಅನುಮತಿ ಇಲ್ಲದೇ ಪ್ರಸಾದ ನೀಡಿದರೆ ಕ್ರಮ

ಗಣಪತಿ ಉತ್ಸವದ ವೇಳೆ ಪ್ರಸಾದ, ಆಹಾರ ಪದಾರ್ಥಗಳು ವಿತರಣೆ ಮಾಡುವವರು ಪರವಾನಗಿ ಇದೆಯೇ ಎಂಬುದನ್ನು ಪರಿಶೀಲಿಸಲು ಆಹಾರ ಗುಣಮಟ್ಟ ಇಲಾಖೆ ಸೂಚನೆ ನೀಡಿದೆ. ಜನರ ಆರೋಗ್ಯ ದೃಷ್ಟಿಯಿಂದ ಪಾಲಿಕೆಗೆ ಪತ್ರದ ಮೂಲಕ ಸಂದೇಶ ನೀಡಲಾಗಿದೆ. ಜೊತೆಗೆ ಎಫ್‌ಎಸ್‌ಎಸ್‌ಎಐನಿಂದ ಅನುಮತಿ ಪಡೆಯದೇ ಇದ್ದವರು ಆಹಾರ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಗಣೇಶ ಕೂರಿಸುವಲ್ಲಿ ಶುಚಿತ್ವ, ಪ್ರಸಾದಕ್ಕೆ ಪರವಾನಗಿ ಬೇಕು

ಬೆಂಗಳೂರು ನಗರದ ಯಾವುದೇ ಜಾಗದಲ್ಲಿ ಗಣಪತಿ ಉತ್ಸವ ಮಾಡಿದರೂ ಎಫ್‌ಎಸ್‌ಎಸ್‌ಎಐನಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಲೇಬೇಕು ಅಂತ ಸೂಚಿಸಲಾಗಿದೆ. ಗಣೇಶೋತ್ಸವ ವೇಳೆ ಪ್ರಸಾದ ವಿನಿಯೋಗ ಇದ್ದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯವಾಗಿದೆ. ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಲೇಬೇಕಿದೆ ಅಂತ ಸೂಚನೆಯಲ್ಲಿ ತಿಳಿಸಲಾಗಿದೆ.

 ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಆಹಾರ ಇಲಾಖೆ ಈ ರೂಲ್ಸ್‌ಗೆ ವಿಪಕ್ಷ ಬಿಜೆಪಿ ಕಿಡಿಕಾರಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಆಕ್ರೋಶದ ಟ್ವೀಟ್ ಮಾಡಿದೆ.

ಸಮಸ್ತ ಹಿಂದೂಗಳ ಮನಸ್ಸಿಗೆ ಘಾಸಿ

ಸ್ಕ್ಯಾಮ್ ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಪರಾಕಾಷ್ಠೆ ಮುಟ್ಟಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ ಗಳಲ್ಲಿ ದೇವರ ಪ್ರಸಾದವನ್ನು FSSAI ಪರವಾನಗಿ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದ ಮಾತ್ರ ತಯಾರಿಸುವಂತೆ ವಿಘ್ನ ಆದೇಶವನ್ನು ಹೊರಡಿಸಿ ಸಮಸ್ತ ಹಿಂದೂಗಳ ಮನಸ್ಸನ್ನು ಘಾಸಿಗೊಳಿಸಿದ್ದಾರೆ ಅಂತ ಬಿಜೆಪಿ ಆರೋಪಿಸಿದೆ.

 ಮುಖ್ಯಮಂತ್ರಿಗಳೇ, ನಿಮ್ಮ ಓಲೈಕೆಗೂ ಒಂದು ಮಿತಿ ಇರಲಿ

‌ಅನ್ಯಮತೀಯರ ಹಬ್ಬಗಳಲ್ಲಿ ಬೀದಿ ಬೀದಿಗಳಲ್ಲಿ ಆಹಾರ ಬೇಯಿಸುವಾಗ ಕೈ ಕಟ್ಟಿಕೊಂಡಿದ್ದ ಸಿದ್ದರಾಮಯ್ಯನವರು, ಈಗ ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬದ ಆಚರಣೆಗೆ ಇಂಥ ವಿಘ್ನಾದೇಶಗಳನ್ನು ಹೊರಡಿಸುವ ಹಕೀಕತ್ತು ಏನಿದೆ? ಮುಖ್ಯಮಂತ್ರಿಗಳೇ, ನಿಮ್ಮ ಓಲೈಕೆಗೂ ಒಂದು ಮಿತಿ ಇರಲಿ ಅಂತ ಟ್ವೀಟ್ ಮಾಡಿ, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Post a Comment

Previous Post Next Post