Bengaluru News: ಬೀದಿಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಶಾಕ್; ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಸಜ್ಜು


 ನಗರದಲ್ಲಿ ಸುಮಾರು 1,200 ಕಿಮೀಗೂ ಅಧಿಕ ಉದ್ದದ ಪ್ರಮುಖ ರಸ್ತೆಗಳಿವೆ. ಈ ರಸ್ತೆಗಳ ಎರಡೂ ಬದಿಯಲ್ಲಿ ಬೀದಿಬದಿ ವ್ಯಾಪಾರಿಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ.

ಬೆಂಗಳೂರು: ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಮತ್ತೆ ಶಾಕ್ ಕೊಟ್ಟಿದೆ. ನಗರದ ಪ್ರಮುಖ ರಸ್ತೆಗಳಲ್ಲಿನ ಪಾದಾಚಾರಿ ಮಾರ್ಗದಲ್ಲಿರುವ ಬೀದಿ ಬದಿ ಅಂಗಡಿಗಳನ್ನು ತೆರವು ಮಾಡಲು ಪಾಲಿಕೆ ಮುಂದಾಗ್ತಿದೆ. ಆದರೆ ಪಾಲಿಕೆಯ ನಿರ್ಧಾರಕ್ಕೆ ಬೀದಿ ಬದಿ ಅಂಗಡಿ ಮಾಲೀಕರು ಸಿಟ್ಟಾಗಿದ್ದಾರೆ.

ಬೆಂಗಳೂನಗರದಲ್ಲಿ ಹರಡಿರುವ ಪ್ರಮುಖ ರಸ್ತೆಗಳಲ್ಲಿನ ಬದಿಯಲ್ಲಿರುವ ಬೀದಿಬದಿ ಅಂಗಡಿಗಳ ತೆರವಿಗೆ ಬೆಂಗಳೂರು ಮಹನಾಗರ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದಲ್ಲಿ ಸುಮಾರು 1,200 ಕಿಮೀಗೂ ಅಧಿಕ ಉದ್ದದ ಪ್ರಮುಖ ರಸ್ತೆಗಳಿವೆ. ಈ ರಸ್ತೆಗಳ ಎರಡೂ ಬದಿಯಲ್ಲಿ ಬೀದಿಬದಿ ವ್ಯಾಪಾರಿಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಇದೀಗ ಈ ರೀತಿ ಪ್ರಮುಖ ರಸ್ತೆಯ ಫುಟ್‌ಪಾತ್ ಮೇಲಿನ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಲು ಪಾಲಿಕೆ ಮುಂದಾಗುತ್ತಿದೆ.

ಫುಟ್‌ಪಾತ್ ಮೇಲೆ ಹೆಚ್ಚು ಬೀದಿಬದಿ ವ್ಯಾಪಾರಿಗಳು

ಮುಖ್ಯವಾಗಿ ನಗರದ ಪ್ರಮುಖ ವ್ಯಾಪಾರ ವಹಿವಾಟು ಕೇಂದ್ರಗಳಿಗೆ ಅಂಟಿಕೊಂಡಿರುವ ಪ್ರಮುಖ ರಸ್ತೆಗಳಲ್ಲಿ ಈ ರೀತಿಯ ಅಂಗಡಿಗಳು ಜಾಸ್ತಿ ಇದೆ. ಕೆಆರ್ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಚಿಕ್ಕಪೇಟೆ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಹೆಬ್ಬಾಳ ಹೂವಿನ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ ಹೀಗೆ ನಗರದ ಮಾರುಕಟ್ಟೆಗಳಿಗೆ ಹೊಂದಿರುವ ರಸ್ತೆಗಳ ಫುಟ್‌ಪಾತ್ ಮೇಲೆ ಹೆಚ್ಚು ಬೀದಿಬದಿ ವ್ಯಾಪಾರಿಗಳಿದ್ದಾರೆ. ಇದರಿಂದಾಗಿ ಪಾದಾಚಾರಿಗಳಿಗೆ ಸಮಸ್ಯೆ ಆಗುತ್ತಿದೆ ಎನ್ನುವುದು ಪಾಲಿಕೆ ವಾದ. ಹೀಗಾಗಿ ತೆರವು ಮಾಡಿ ಪಾದಾಚಾರಿಗಳಿಗೆ ಅನುವು ಮಾಡಿಕೊಡಬೇಕು ಎನ್ನುವುದು ಹೈಕೋರ್ಟ್ ನಿದರ್ಶನ ಅಂತಿದ್ದಾರೆ ಪಾಲಿಕೆ ಅಧಿಕಾರಿಗಳು.

 ಬಿಬಿಎಂಪಿ ನಿರ್ಧಾರಕ್ಕೆ ಬೀದಿಬದಿ ವ್ಯಾಪಾರಿಗಳು ಕೆಂಡ

ಕಳೆದ ಹಲವು ವರ್ಷಗಳಿಂದ ಹಲವು ಕಾರಣಗಳಿಗಾಗಿ ಪಾಲಿಕೆ ಹಾಗೂ ಬೀದಿಬದಿ ವ್ಯಾಪಾರಿಗಳ ನಡುವೆ ಸಮರ ನಡೆಯುತ್ತಲೇ ಇದೆ. ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳಿಗೆ ಅಧಿಕೃತವಾಗಿಸುವ ಗುರುತಿನ‌ ಚೀಟಿ ಕೊಡಬೇಕು ಎನ್ನುವುದು ಬೀದಿಬದಿ ವ್ಯಾಪಾರಿಗಳ ಆಗ್ರಹ. ಅದರ ಮಧ್ಯೆ ಏಕಾಏಕಿಯಾಗಿ ಯಾವುದೇ ನೊಟೀಸ್ ನೀಡದೆ ತೆರವು ಮಾಡೋದು ಅಂದರೆ ನಮ್ಮ ಬದುಕು ಕಿತ್ತುಕೊಂಡ ಹಾಗೆ ಎನ್ನುತ್ತಿದ್ದಾರೆ ಬೀದಿಬದಿ ವ್ಯಾಪಾರಿಗಳು.

ಇದನ್ನೂ ಓದಿ: BMTC New Bus Routes: ಕೆಆರ್‌ ಮಾರುಕಟ್ಟೆಯಿಂದ ಈ ಭಾಗಕ್ಕೆ ಬಸ್ ಸೇವೆ ಆರಂಭಿಸಿದ ಬಿಎಂಟಿಸಿ, ವಿವರ ಗಮನಿಸಿ

 2022ರಲ್ಲಿ ಬಿಬಿಎಂಪಿ ನಗರದ 25 ಸಾವಿರ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಐಡಿ ಕಾರ್ಡ್ ನೀಡಿತ್ತು. ಅದಾಗಿ ಪ್ರತಿ ವರ್ಷ ಇದೇ ರೀತಿಯಾಗಿ ಗುರುತಿನ ಚೀಟಿ ನೀಡುವುದಾಗಿ ಹೇಳಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಐಡಿ ಕಾರ್ಡ್ ವಿತರಣೆ ನೆನೆಗುದಿಗೆ ಬಿದ್ದಿದೆ. ಅಂದಾಜು ನಗರದಲ್ಲಿ 1.5 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿದ್ದಾರೆ ಎನ್ನಲಾಗಿದೆ. ಎಲ್ಲರನ್ನೂ ತೆರವು ಮಾಡುವುದಾದರೆ ಪರ್ಯಾಯ ಜಾಗ ನೀಡಬೇಕು ಎನ್ನುವ ಒತ್ತಾಯವೂ ಇದೆ.

Post a Comment

Previous Post Next Post