Supreme Court: ಅತ್ಯಾಚಾರ ಸಂತ್ರಸ್ತೆಯ ಜಾತಕ ಸಲ್ಲಿಕೆಗೆ ಆದೇಶ ನೀಡಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ


 ಸುಪ್ರೀಂ ಕೋರ್ಟ್ಜಾಮೀನು ಅರ್ಜಿ ನಿರ್ಧರಿಸುವಾಗ ವ್ಯಕ್ತಿಯ ಖಾಸಗಿ ವಿಷಯವಾಗಿರುವ ಜ್ಯೋತಿಷ್ಯದ ಕ್ಷೇತ್ರವನ್ನು ನ್ಯಾಯಾಲಯಕ್ಕೆ ತರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನವದೆಹಲಿ: ಅತ್ಯಾಚಾರ ಸಂತ್ರಸ್ತೆಗೆ ಕುಜದೋಷ ಇದೆಯೇ ಎಂದು ಅಧ್ಯಯನ ಮಾಡಲು ಆಕೆಯ ಜಾತಕವನ್ನು ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್‌ (Allahabad Highcourt) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ತಡೆ ನೀಡಿದೆ. ಅಲ್ಲದೇ, ಜಾಮೀನು ಅರ್ಜಿ ನಿರ್ಧರಿಸುವಾಗ ವ್ಯಕ್ತಿಯ ಖಾಸಗಿ ವಿಷಯವಾಗಿರುವ ಜ್ಯೋತಿಷ್ಯದ (Astrology) ಕ್ಷೇತ್ರವನ್ನು ನ್ಯಾಯಾಲಯಕ್ಕೆ ತರುವಂತಿಲ್ಲ ಎಂದು ಉಚ್ಛ ನ್ಯಾಯಾಲಯ ಹೇಳಿದೆ.



ನಿನ್ನನ್ನು ನಾನು ಮದುವೆಯಾಗುತ್ತೇನೆ ಎಂದು ನಂಬಿಸಿ ಯುವತಿಯನ್ನು ಅತ್ಯಾಚಾರ ಎಸಗಿದ್ದ ಆರೋಪಿ ಗೋಬಿಂದ್ರಾಯ್ ನಂತರ ಆಕೆಯ ಜಾತಕದಲ್ಲಿ ಕುಜದೋಷ ಸಮಸ್ಯೆ ಇದೆ ಎಂದು ನೆಪ ನೀಡಿ ಮದುವೆಯಾಗಲು ನಿರಾಕರಿಸಿದ್ದ. ನಂಬಿಸಿ ಮೋಸ ಮಾಡಿದ ಆರೋಪಿ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದ್ದ ಸಂತ್ರಸ್ತ ಯುವತಿ ತನಗೆ ನ್ಯಾಯ ನೀಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: Crime News: ಮಾದಕ ವಸ್ತು ನೀಡಿ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ! ಆರೋಪಿ ಪರಾರಿ



ಕುಜದೋಷ ಮದುವೆ ತಪ್ಪಿಸಲು ನೆಪ!



ಇತ್ತೀಚೆಗೆ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಅಲಹಾಬಾದ್ ನ್ಯಾಯಾಲಯ, ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿತ್ತು. ಈ ವೇಳೆ ತನ್ನ ಪರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ಅತ್ಯಾಚಾರ ಆರೋಪಿ, ಸಂತ್ರಸ್ತೆಗೆ ಕುಜದೋಷವಿರುವ ಕಾರಣ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದ. ಆದರೆ ಯುವತಿಗೆ ಅಂತಹ ಯಾವುದೇ ದೋಷವಿಲ್ಲ ಎಂದು ಸಂತ್ರಸ್ತೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಯುವತಿಯ ಕುಂಡಲಿ ಅಧ್ಯಯನ ಮಾಡುವಂತೆ ಲಖನೌ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಸೂಚಿಸಿತ್ತು.

 ಅಲಹಾಬಾದ್‌ ಹೈಕೋರ್ಟ್‌ನ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು. ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಕೃತ್ಯ ಎಸಗಿದ್ದಾನೆ. ಈಗ ನಂಬಿಸಿ ಮೋಸ ಮಾಡುತ್ತಿರುವ ಸಮಯದಲ್ಲಿ ಜಾತಕ ಕುಂಡಲಿ ಎಂದು ನೆಪ ಹೇಳುವುದನ್ನು ಖಂಡಿಸುವ ಬದಲು ಆಕೆಯ ಜಾತಕವನ್ನು ಅಧ್ಯಯನ ಮಾಡಲು ಹೇಳೋದು ಸರಿಯಾದ ನಿರ್ಧಾರವಲ್ಲ, ಕೃತ್ಯ ಎಸಗಲು ಮೊದಲು ಆಕೆಯ ಜಾತಕದ ಬಗ್ಗೆ ತಿಳಿದುಕೊಳ್ಳಬೇಕಿತ್ತಲ್ಲವೇ ಎಂದು ಪ್ರಜ್ಞಾವಂತರು ಹೇಳಿದ್ದರು.

ಇದೀಗ ಅಲಹಾಬಾದ್ ಹೈಕೋರ್ಟ್‌ನ ಜಾತಕ ಅಧ್ಯಯನ ಮಾಡುವ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ‘ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ನಾವು ಅರ್ಹತೆ ಆಧಾರದಲ್ಲಿ ಯಾವುದೂ ನಿರ್ಧಾರವಾಗಿಲ್ಲ ಎಂದು ಹೇಳುತ್ತಿದ್ದೇವೆ. ಮೇ 23ರಿಂದಲೇ ಅನ್ವಯವಾಗುವಂತೆ ಆದೇಶವನ್ನು ತಡೆ ಹಿಡಿಯುತ್ತಿದ್ದೇವೆ. ಹೈಕೋರ್ಟ್‌ ಮುಂದಿನ ವಿಚಾರಣೆ ದಿನವೇ ಪ್ರಕರಣವನ್ನು ಆಲಿಸಬಹುದು ಮತ್ತು ಅದು ಅರ್ಹತೆಯ ಆಧಾರದ ಮೇಲೆ ವ್ಯವಹರಿಸಬೇಕು” ಎಂದು ಆದೇಶಿಸಿದೆ.



ಇದನ್ನೂ ಓದಿ: Viral Video: ರೈಲಿನ ಬೋಗಿಯಲ್ಲಿ ಕಿಕ್ಕಿರಿದು ತುಂಬಿದ್ದ ಜನರು! ದುರಂತಕ್ಕೂ ಮುನ್ನ ಎನ್ನಲಾದ ವಿಡಿಯೋ ವೈರಲ್



ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಅಲಾಹಾಬಾದ್ ಹೈಕೋರ್ಟ್‌ನ ನ್ಯಾ. ಬ್ರಿಜ್ ರಾಜ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ, ಮಹಿಳೆ ಮತ್ತು ಅತ್ಯಾಚಾರ ಆರೋಪಿ ಗೋಬಿಂದ್ರಾಯ್‌ಗೆ ತಮ್ಮ ಕುಂಡಲಿಗಳನ್ನು ಲಖನೌ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಅಲ್ಲದೆ ಮೂರು ವಾರಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. ಈ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ಆರೋಪಿಗಳ ಜಾಮೀನು ಅರ್ಜಿಯನ್ನು ಅರ್ಹತೆಯ ಆಧಾರದ ಮೇಲೆ ನಿರ್ಧರಿಸುವಂತೆ ಹೈಕೋರ್ಟ್‌ಗೆ ಸೂಚನೆ ನೀಡಿತು.

ಹಿಂದೂ ಜ್ಯೋತಿಷ್ಯದ ಪ್ರಕಾರ ಕುಜನ ಪ್ರಭಾವದಿಂದ ಜನಿಸಿದ ವ್ಯಕ್ತಿಗೆ ಕುಜದೋಷವಿದೆ ಎಂದು ಹೇಳಲಾಗುತ್ತದೆ. ಅಂತಹವರನ್ನು ಮದುವೆಯಾಗುವವರ ಜೀವಕ್ಕೆ ಸಂಚಕಾರ ಎದುರಾಗುತ್ತದೆ ಎಂಬ ಮೂಢನಂಬಿಕೆಯೂ ಇದೆ.

Post a Comment

Previous Post Next Post