ಹಿಂದೂ ಧರ್ಮ ಅಷ್ಟೊಂದು ದುರ್ಬಲವೇ?: ಪ್ರಲ್ಹಾದ ಜೋಶಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ


  ಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ 'ಸಮೀಕ್ಷೆಯಿಂದ ಮತಾಂತರ ಸಾಧ್ಯವೇ? ನಿಮ್ಮ ಪ್ರಕಾರ ಹಿಂದೂ ಧರ್ಮ ಅಷ್ಟೋಂದು ದುರ್ಬಲವೇ?' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಪ್ರಶ್ನಿಸಿದ್ದಾರೆ

 ಸಮೀಕ್ಷೆಯು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ ಎಂದಿರುವ ಜೋಶಿಯವರೇ, 'ನಿಮ್ಮ ಪಕ್ಷದ ನಾಯಕರು ಕುಟುಂಬ ಸಮೇತ ಮತಾಂತರಗೊಂಡಿದ್ದಾರೆ ಎಂಬುದಾಗಿ ನಿಮ್ಮದೇ ಪಕ್ಷದವರು ತಿಳಿಸಿದ್ದಾರೆ. ಅವರ ಮತಾಂತರಕ್ಕೆ ಪ್ರೇರಣೆಯಾದ ಸಂಗತಿ ಯಾವುದು? ನಿಮ್ಮ ಪಕ್ಷದವರಿಗಾಗಿ 'ಘರ್‌ ವಾಪಸಿ' ಕಾರ್ಯಕ್ರಮ ಹಮ್ಮಿಕೊಳ್ಳುವಿರಾ' ಎಂದು ಕೇಳಿದ್ದಾರೆ.


ಹಿಂದೂ ಧರ್ಮ ಸಮೀಕ್ಷೆಯಿಂದ ಮತಾಂತರವಾಗುವಷ್ಟು ದುರ್ಬಲವೇ ಎಂದು ಪ್ರಶ್ನಿಸಿರುವ ಪ್ರಿಯಾಂಕ್‌, 'ನಿಮಗೆ ತಿಳಿದಿರಲಿ, ಜನರಿಗೆ ಬೇಕಿರುವುದು ಮ್ಯಾಜಿಕ್‌ ಮಾತುಗಳಲ್ಲ, ಲಾಜಿಕ್‌ ಮಾತುಗಳು' ಎಂದು ತಿವಿದಿದ್ದಾರೆ.


'ಜನಗಣತಿಯು ಹಿಂದೂಗಳನ್ನು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ' ಎಂದು ಜೋಶಿಯವರು ಹೇಳಿರುವುದಾಗಿ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದೇ ರೀತಿ, 'ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರೇ ಕುಟುಂಬ ಸಮೇತ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದಾರೆ' ಎಂಬುದಾಗಿ ಬಿಜೆಪಿ ನಾಯಕರೇ ಹೇಳಿರುವುದಾಗಿ 2021ರಲ್ಲಿ ವರದಿಯಾಗಿತ್ತು. ಈ ಎರಡನ್ನೂ ಉಲ್ಲೇಖಿಸಿರುವ ಪ್ರಿಯಾಂಕ್‌, ಜೋಶಿಯವರಿಗೆ ಕುಟುಕಿದ್ದಾರೆ.

 ಮತಾಂಧ ಶಕ್ತಿಗಳಿಗೆ ಸಿದ್ದರಾಮಯ್ಯ ಪ್ರೇರಣೆ: ಜೋಶಿ

'ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರ ನಡೆಸಲು ಹೊರಟಿರುವ ಸಮೀಕ್ಷೆಗೆ ಅಧಿಕೃತ ಮಾನ್ಯತೆ ಇಲ್ಲ. ಈ ಹಿಂದೆ ಸಮೀಕ್ಷೆ ಹೆಸರಲ್ಲಿ‌ ₹400 ಕೋಟಿ ಕಳೆದಿದ್ದರು. ಈಗ ಮತ್ತೆ ಹಣ ವ್ಯರ್ಥ ಮಾಡಲು ಹೊರಟಿದ್ದಾರೆ' ಎಂದು ಜೋಶಿ ಕಳೆದವಾರ ಆರೋಪಿಸಿದ್ದರು.


'ಸೋನಿಯಾ ಗಾಂಧಿ ಅವರ ಸೂಚನೆಯಂತೆ ಹಿಂದೂ ಸಮಾಜವನ್ನು ಒಡೆಯಲು ಕಾಂಗ್ರೆಸ್ ಪಕ್ಷ ಹೊರಟಿದೆ. ರಾಜ್ಯ ಸರ್ಕಾರ ಯಾವ ಆಧಾರದಲ್ಲಿ ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್‌ ಜಾತಿಗಳನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂಧ ಶಕ್ತಿಗಳಿಗೆ ಪ್ರೇರಣೆ ಕೊಡುತ್ತಿದ್ದಾರೆ. ಮತಾಂತರವಾದವರಿಗೆ ಮೀಸಲಾತಿ ಇಲ್ಲ ಎಂಬುದನ್ನು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ, ಈಗ ಎಸ್‌ಟಿ ಕ್ರಿಶ್ಚಿಯನ್ ಎಂಬ ಜಾತಿ ಸೃಷ್ಟಿಸಿ ಅವರಿಗೆ ಮೀಸಲಾತಿ ಕೊಡಲು ರಾಜ್ಯ ಸರ್ಕಾರ ಹೊರಟಿದೆ‌' ಎಂದು ದೂರಿದ್ದರು.

Post a Comment

Previous Post Next Post