ಗಳೂರು, ಅಕ್ಟೋಬರ್ 04: ಬಿಜೆಪಿ 40 ಪರ್ಸೆಂಟ್ ಕಮಿಶನ್ ಎಂದು ಆರೋಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ 80 ಪರ್ಸೆಂಟ್ ಲಂಚ ವಸೂಲಿ ಮಾಡುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಜನರೇ ಅಧಿಕಾರದಿಂದ ಕೆಳಕ್ಕೆ ಇಳಿಸುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಗೆ ಭೇಟಿ ನೀಡುವ ಜೊತೆಗೆ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಲಿ. ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹವಾಗಿ ರೈತರಿಗೆ ಸಾಕಷ್ಟು ನಷ್ಟವಾಗಿದೆ. ರಸ್ತೆಯಲ್ಲೇ ಬರಬಹುದಾದ ಅವಕಾಶವಿದ್ದರೂ ವೈಮಾನಿಕ ಸಮೀಕ್ಷೆಗೆ ಮೊರೆಹೋಗಿದ್ದಾರೆ. ಈವರೆಗೆ ಪರಿಹಾರ ನೀಡಿಲ್ಲ. ಸಮೀಕ್ಷೆ ವರದಿ ಬಂದ ನಂತರ ಪರಿಹಾರ ನೀಡುತ್ತೇವೆ ಎಂದಿದ್ದಾರೆ. ಬಿಜೆಪಿ ಅವಧಿಯಲ್ಲಿ ಎನ್‌ಡಿಆರ್‌ಎಫ್ ನಿಯಮದಡಿ ಮಳೆಯಾಶ್ರಿತ ಜಮೀನಿಗೆ 6,200 ರೂ. ಪರಿಹಾರವಿದ್ದರೆ, 13,600 ರೂ, ನೀಡಲಾಗಿತ್ತು. ನೀರಾವರಿ ಜಮೀನಿಗೆ 13,500 ರೂ. ಬದಲು 25,000 ರೂ. ನೀಡಲಾಗಿತ್ತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಬದಲು 28,000 ರೂ. ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಪಾಪರ್ ಅಲ್ಲವಾದರೆ ಇದಕ್ಕಿಂತ ಹೆಚ್ಚು ಪರಿಹಾರ ನೀಡಲಿ ಎಂದು ವಿವರಿಸಿದರು.
ಈ ಭಾಗದಲ್ಲಿ ಸೋಯಾಬೀನ್ ಬೆಳೆಗೆ ಎಕರೆಗೆ ರೈತರಿಗೆ ತಲಾ 25,000 ರೂ. ಖರ್ಚಾಗಿದೆ. ಇಷ್ಟೇ ಮೊತ್ತದ ಪರಿಹಾರವನ್ನು ಸರ್ಕಾರ ನೀಡಬೇಕಿದೆ. ಆದರೆ ಈ ರೈತರ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ ಈವರೆಗೆ ಒಂದು ವರದಿಯನ್ನೂ ನೀಡಿಲ್ಲ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ 11,603 ಕೋಟಿ ರೂ. ನೀಡಿದೆ. ಯುಪಿಎ ಸರ್ಕಾರ ಕೇವಲ 3,000 ಕೋಟಿ ರೂ. ನೀಡಿತ್ತು. ಇಷ್ಟಾದರೂ ಕೇಂದ್ರ ಸರ್ಕಾರಕ್ಕೆ ಅಗೌರವ ತರುವ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದರು.
ಸರ್ಕಾರದ ಬಳಿ ಹಣವಿಲ್ಲವೆಂದೇ ಪರಿಹಾರ ನೀಡುತ್ತಿಲ್ಲ. ಎಸ್‌ಸಿ, ಎಸ್‌ಟಿಗೆ ಸೇರುವ ಹಣವನ್ನು ಗ್ಯಾರಂಟಿಗೆ ಬಳಸಿದ್ದಾರೆ. ಆದರೆ ಪರಿಹಾರ ನೀಡಲು ಮಾತ್ರ ಹಣವಿಲ್ಲ. ಸಿದ್ದರಾಮಯ್ಯ ಈಗ ಔಟ್‌ಗೋಯಿಂಗ್ ಮುಖ್ಯಮಂತ್ರಿ. ಅದಕ್ಕಾಗಿ ಮುಸ್ಲಿಮರನ್ನು ಕರೆಸಿ ದಸರಾ ಉದ್ಘಾಟನೆ ಮಾಡಿಸಿದ್ದಾರೆ. ಅಲ್ಲಿ ಮಾಡಿ ಪುಷ್ಪಾರ್ಚನೆಯೇ ಕೊನೆಯ ಪೂಜೆಯಾಗಿದೆ. ಕಾಂಗ್ರೆಸ್ ಶಾಸಕರೇ ಇವರು ಹೋಗುತ್ತಾರೆ ಎನ್ನುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದರು.
ರೈತರ ಅಹವಾಲು ಆಲಿಸಿದ ಬಿಜೆಪಿ ತಂಡ
ವಿಜಯಪುರದಲ್ಲಿ ಧಾರಾಕಾರ ಮಳೆ, ಭೀಮೆ ಹಾಗೂ ಡೋಣಿ ನದಿ ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಹಾಗೂ ಜಮೀನುಗಳಿಗೆ ವಿಪಕ್ಷ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಅನೇಕ ಹಿರಿಯ ನಾಯಕರ ತಂಡ ಭೇಟಿ ನೀಡಿ ರೈತರ ಅಹವಾಲು ಆಲಿಸಿತು. ಅಂಜುಟಗಿ, ಅಗರಖೇಡ, ಮಿರಗಿ, ದೇವಣಗಾಂವ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.
ಅಕಾಲಿಕ ಮಳೆ ಹಾಗೂ ನದಿ ಪ್ರವಾಹದಿಂದ ದೊಡ್ಡ ಮಟ್ಟದ ನೀರು ಹೊಲಗಳಿಗೆ ನುಗ್ಗಿದ ಪರಿಣಾಮ ಬೆಳೆಗಳಿಗೆ ಆಗಿರುವ ಹಾನಿ ಕಂಡು ಅಶೋಕ್ ಕೆಲಕ್ಷಣ ಆಘಾತಗೊಂಡರು. ಅಪಾರ ಪ್ರಮಾಣದ ತೊಗರಿ, ಸೂರ್ಯಪಾನ, ಕಬ್ಬು ನೀರಿನ ಪ್ರವಾಹಕ್ಕೆ ಸಿಲುಕಿದ್ದನ್ನು ಕಂಡು ಆತಂಕ ವ್ಯಕ್ತಪಡಿಸಿದರು. ಜೊತೆಗೆ ಮಳೆಯಿಂದ ಹಾನಿಗೀಡಾಗಿರುವ ಮನೆಗಳನ್ನು ವೀಕ್ಷಿಸಿ ಜಲಾವೃತವಾಗಿರುವ ಮನೆಗಳಿಗೂ ಭೇಟಿ ನೀಡಿ ಅಹವಾಲು ಆಲಿಸುವ ಕೆಲಸ ಮಾಡಿದರು.
ಬಂಗಾರ ವರ್ಣದಿಂದ ಕಂಗೊಳಿಸುವ ಸೂರ್ಯಪಾನ ಹೊಲ ನೋಡುವುದೇ ಒಂದು ಹಬ್ಬ, ಆದರೆ ಧಾರಾಕಾರ ಮಳೆ ಹಾಗೂ ನದಿ ಪ್ರವಾಹದಿಂದಾಗಿ ದೊಡ್ಡ ಮಟ್ಟದಲ್ಲಿ ನೀರಿನ ಹರಿವಿನಿಂದಾಗಿ ಸೂರ್ಯಪಾನ ಬಾಡಿ ಕಪ್ಪು ಬಣ್ಣಕ್ಕೆ ತಿರುಗಿದ್ದನ್ನು ಕಂಡು ಪ್ರತಿಪಕ್ಷ ನಾಯಕ ಆರ್. ಅಶೋಕ ಸೇರಿದಂತೆ ಅನೇಕ ಮುಖಂಡರು ಬೇಸರ ವ್ಯಕ್ತಪಡಿಸಿದರು.

Post a Comment