ಜ್ಯದ ಬೊಕ್ಕಸ ತುಂಬಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಹೊಸ ಕ್ರಮ ತೆಗೆದುಕೊಂಡಿದೆ. ಇದು ಕೆಲವರ ವಿರೋಧಕ್ಕೆ ಕೂಡ ಗುರಿಯಾಗಿದೆ. ಅದೇನೆಂದರೆ ನಿಷ್ಕ್ರಿಯವಾಗಿರುವಂತಹ ಅಬಕಾರಿ ಲೈಸೆನ್ಸ್‌ಗಳನ್ನು, ಹಣಕಾಸು ಇಲಾಖೆ ಹರಾಜು ಮಾಡಲು ಮುಂದಾಗಿದೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂ.
ಹೆಚ್ಚುವರಿ ಆದಾಯ ತುಂಬಿಸಲು ಮುಂದಾಗಿದೆ.
ಸರ್ಕಾರವು ವಿಶೇಷವಾಗಿ CL-2 (ಚಿಲ್ಲರೆ ಮದ್ಯದ ಅಂಗಡಿ) ಮತ್ತು CL-9 (ಬಾರ್ ಮತ್ತು ರೆಸ್ಟೋರೆಂಟ್) ಪರವಾನಗಿಗಳನ್ನು ಹರಾಜು ಹಾಕಲು ತೀರ್ಮಾನಿಸಿದೆ. ಜೊತೆಗೆ, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಮೂಲಕ ನಡೆಯುವ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಿಗೆ ನೀಡಲ್ಪಟ್ಟ CL-11(C) ಪರವಾನಗಿಗಳನ್ನು ಸಹ ಹರಾಜು ಮಾಡಲು ಸಿದ್ದತೆ ನಡೆದಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಕಚೇರಿಯ ಪ್ರಕಾರ, ಒಟ್ಟು 579 ನಿಷ್ಕ್ರಿಯ ಪರವಾನಗಿಗಳು ಹರಾಜಿಗೆ ಬರಲಿವೆ.
1992ರಿಂದ ರಾಜ್ಯದಲ್ಲಿ ಹೊಸ CL-2 ಮತ್ತು CL-9 ಪರವಾನಗಿಗಳನ್ನು ನೀಡಲಾಗುತ್ತಿಲ್ಲ. ಪ್ರಸ್ತುತ ರಾಜ್ಯದಲ್ಲಿ 3,995 CL-2 ಹಾಗೂ 3,637 CL-9 ಪರವಾನಗಿಗಳು ಇವೆ. ಇವುಗಳನ್ನು ವರ್ಷಕ್ಕೊಮ್ಮೆ ನವೀಕರಿಸಲಾಗುತ್ತದೆ. ಹೊಸ ಪರವಾನಗಿಗಳಿಲ್ಲದ ಕಾರಣದಿಂದ ಹಳೆಯ ಪರವಾನಗಿಗಳಿಗೆ ಭಾರೀ ಬೇಡಿಕೆ ಇರುತ್ತದೆ. ಕೆಲವೊಮ್ಮೆ ಒಂದು ಪರವಾನಗಿಗೆ ಕೋಟ್ಯಾಂತರ ರೂಪಾಯಿ ಬೆಲೆಯೂ ಕೇಳಲಾಗುತ್ತದೆ. ಆದರೆ ಸರ್ಕಾರವು ಪಡೆಯುವ ಶುಲ್ಕ CL-2ಗೆ 4-6 ಲಕ್ಷ ರೂ. ಹಾಗೂ CL-9ಗೆ 4-7.5 ಲಕ್ಷ ರೂ.ಗಳಷ್ಟೇ ಇರುತ್ತದೆ.
ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಪ್ರಕಾರ, ಬೆಂಗಳೂರಿನಲ್ಲಿ ಒಂದೇ ಪರವಾನಗಿಗೆ 3.8 ಕೋಟಿ ರೂ.ಗಳವರೆಗೆ ಬೆಲೆ ಸಿಗುತ್ತದೆ. ಹರಾಜಿನಲ್ಲಿ ಪ್ರತಿ ಪರವಾನಗಿಗೆ 3 ಕೋಟಿ ರೂ.ಗಳವರೆಗೆ ಬರಬಹುದು ಎಂಬ ನಿರೀಕ್ಷೆಯಿದೆ. ಬೆಂಗಳೂರಿನ ಹೊರಗೆ ಒಂದು ಪರವಾನಗಿಗೆ ಸುಮಾರು 1 ಕೋಟಿ ರೂ.ಗಳವರೆಗೆ ಸಿಗುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ ಒಟ್ಟು 500 ಕೋಟಿ ರೂ.ಗಳವರೆಗೆ ಆದಾಯ ಬರಬಹುದು.
ಕರಡು ನಿಯಮಗಳ ಪ್ರಕಾರ, ಹರಾಜು ಮಾಡಲಿರುವ ಪರವಾನಗಿಗಳಿಗೆ CL-2A ಮತ್ತು CL-9A ಎಂಬ ಎರಡು ಹೊಸ ವಿಭಾಗಗಳನ್ನು ರಚಿಸಲಾಗುವುದು. ಜೊತೆಗೆ, ಪರವಾನಗಿದಾರರ ಮರಣದ ಸಂದರ್ಭದಲ್ಲಿ ಅವರ ಕಾನೂನುಬದ್ಧ ವಾರಸುದಾರರಿಗೆ ಪರವಾನಗಿ ವರ್ಗಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ.
ರಾಜ್ಯದ ಅಬಕಾರಿ ಆದಾಯವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2024-25ರಲ್ಲಿ 35,783 ಕೋಟಿ ರೂ. ಆದಾಯ ಗಳಿಸಿದ ಸರ್ಕಾರವು ಈ ಹಣಕಾಸು ವರ್ಷದಲ್ಲಿ 40,000 ಕೋಟಿ ರೂ.ಗಳ ಗುರಿ ಹೊಂದಿದೆ. ಆಗಸ್ಟ್ ವರೆಗೆ ಈಗಾಗಲೇ 16,358 ಕೋಟಿ ರೂ.ಗಳ ಅಬಕಾರಿ ಆದಾಯ ಸಂಗ್ರಹವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ರ ಬಜೆಟ್‌ನಲ್ಲಿ ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಬಳಕೆಯಾಗದ ಮದ್ಯ ಪರವಾನಗಿಗಳನ್ನು ಹಂಚಿಕೆ ಮಾಡುವುದಾಗಿ ಘೋಷಿಸಿದ್ದರು. ಈ ಕ್ರಮದಿಂದ ರಾಜ್ಯಕ್ಕೆ ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
Post a Comment