ಬೆಳಿಗ್ಗೆ 11 ಗಂಟೆಗೇ ಜನಸಮೂಹ ನೆರೆದಿತ್ತು, ವಿಜಯ ಸಂಜೆ ಏಳು ಗಂಟೆಗೆ ಆಗಮಿಸಿದ್ದರು: ಎಫ್‌ಐಆರ್‌ ನಲ್ಲಿ ಉಲ್ಲೇಖ


  ನ್ನೈ,ಸೆ.29: ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ ಅವರಿಂದ 'ರಾಜಕೀಯ ಶಕ್ತಿಯ ಉದ್ದೇಶಪೂರ್ವಕ ಪ್ರದರ್ಶನ'ವು ತಮಿಳುನಾಡಿನ ಕರೂರಿನಲ್ಲಿ ಶನಿವಾರ ಸಂಜೆ ಕಾಲ್ತುಳಿತದಲ್ಲಿ 41 ಜನರ ಸಾವಿಗೆ ಕಾರಣವಾಗಿತ್ತು ಎಂದು ಪೋಲಿಸರು ಎಫ್‌ಐಆರ್‌ನಲ್ಲಿ ಬೆಟ್ಟು ಮಾಡಿದ್ದಾರೆ.

 ರ್ಯಾಲಿಯು ಬೆಳಿಗ್ಗೆ ಒಂಭತ್ತು ಗಂಟೆಗೆ ಆರಂಭಗೊಳ್ಳಬೇಕಿತ್ತು ಮತ್ತು 11 ಗಂಟೆಯ ವೇಳೆಗೆ ಬೃಹತ್ ಜನಸಮೂಹ ಸೇರಿತ್ತು. ವಿಜಯ ಮಧ್ಯಾಹ್ನ 12 ಗಂಟೆಗೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ತಾನು ಸ್ಥಳವನ್ನು ತಲುಪುತ್ತಿರುವುದಾಗಿ ಜನರಿಗೆ ತಿಳಿಸಿದ ಬಳಿಕ ನಾಲ್ಕು ಗಂಟೆಗಳಷ್ಟು ವಿಳಂಬವಾಗಿ ವಿಜಯ ಆಗಮಿಸಿದ್ದರು.


'ಅನಗತ್ಯ ನಿರೀಕ್ಷೆಗಳನ್ನು' ನಿರ್ಮಿಸಲು ತನ್ನ ಆಗಮನವನ್ನು ಅವರು ವಿಳಂಬಗೊಳಿಸಿದ್ದರು ಎಂದು ಪೋಲಿಸರು ಎಫ್‌ಐಆರ್‌ ನಲ್ಲಿ ಹೇಳಿದ್ದಾರೆ.


ಪೋಲಿಸರ ಪ್ರಕಾರ, ವಿಜಯ್ ಇದ್ದ ಬಸ್ ಹಲವಾರು ಕಡೆಗಳಲ್ಲಿ ನಿಗದಿತವಲ್ಲದ ನಿಲುಗಡೆಗಳನ್ನು ಮಾಡಿತ್ತು, ವಾಸ್ತವಿಕವಾಗಿ ಇದು ಯಾವುದೇ ಅನುಮತಿ ಪಡೆದಿರದ ರೋಡ್ ಶೋ ಆಗಿತ್ತು. ವಿಜಯ ಮತ್ತು ಪುದುಚೇರಿಯ ಮಾಜಿ ಶಾಸಕ ಎನ್ 'ಬಸ್ಸಿ' ಆನಂದ ಸೇರಿದಂತೆ ಟಿವಿಕೆ ನಾಯಕರು ಜನಸಮೂಹಕ್ಕೆ ಆಹಾರ, ನೀರು ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದರು.


ಪ್ರಚಾರ ವಾಹನಗಳು ಆಗಾಗ್ಗೆ ನಿಗದಿತವಲ್ಲದ ನಿಲುಗಡೆಗಳನ್ನು ಮಾಡಿದ್ದೂ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತ್ತು ಎಂದು ಪೋಲಿಸರು ಹೇಳಿದ್ದಾರೆ.


ಶನಿವಾರ ಸಂಜೆ ನಡೆದ ದುರಂತಗಳಲ್ಲಿ ಒಂದನ್ನು ಉಲ್ಲೇಖಿಸಿರುವ ಎಫ್‌ಐಆರ್, ಜನಜಂಗುಳಿಯನ್ನು ನಿಯಂತ್ರಿಸಲು ಮತ್ತು ಕಾಲ್ತುಳಿತದಂತಹ ವಿಪತ್ತುಗಳನ್ನು ತಡೆಯಲು ಸ್ಥಾಪಿಸಲಾಗಿದ್ದ ಪೋಲಿಸ್ ಬ್ಯಾರಿಯರ್‌ ಗಳನ್ನು ಭೇದಿಸಿದ ಟಿವಿಕೆ ಕಾರ್ಯಕರ್ತರು ಬಹುಶಃ ನಟನ ದರ್ಶನಕ್ಕಾಗಿ ಶೆಡ್‌ ವೊಂದರ ತಗಡಿನ ಛಾವಣಿಯನ್ನು ಹತ್ತಿದ್ದರು. ದುರದೃಷ್ಟವಶಾತ್ ಅದು ಕುಸಿದು ಬಿದ್ದು ಟಿವಿಕೆ ಕಾರ್ಯಕರ್ತರು ಮೃತಪಟ್ಟರು ಎಂದು ಹೇಳಿದೆ.


10,000 ಜನರು ಸೇರಲಿದ್ದಾರೆ ಎಂದು ತಮಗೆ ತಿಳಿಸಲಾಗಿತ್ತು. ಆದರೆ 25,000ಕ್ಕೂ ಅಧಿಕ ಜನರು ಜಮಾಯಿಸಿದ್ದರು ಎಂದೂ ಪೋಲಿಸರು ಹೇಳಿದ್ದಾರೆ.


ಕಾಲ್ತುಳಿತವು ಆಡಳಿತಾರೂಢ ಡಿಎಂಕೆ ಮತ್ತು ಟಿವಿಕೆ ನಡುವೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.


ಕಾಲ್ತುಳಿತವು ಡಿಎಂಕೆ ರೂಪಿಸಿದ್ದ ಪಿತೂರಿಯಾಗಿತ್ತು ಎಂದು ಟಿವಿಕೆ ದೂರಿದ್ದರೆ,'ಇದನ್ನು ರಾಜಕೀಯಗೊಳಿಸಲು ನಾವು ಬಯಸುವುದಿಲ್ಲ. ಕಾನೂನು ತನ್ನದೇ ಮಾರ್ಗದಲ್ಲಿ ಸಾಗುತ್ತದೆ 'ಎಂದು ಡಿಎಂಕೆ ಹೇಳಿದೆ.


ಈ ನಡುವೆ ಕಾಲ್ತುಳಿತ ಘಟನೆಯ ಕುರಿತು ತನಿಖೆಗೆ ವಿಶೇಷ ತಂಡವನ್ನು ರಚಿಸುವಂತೆ ಅಥವಾ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಟಿವಿಕೆ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ.


ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 41 ಜನರು ಮೃತಪಟ್ಟಿದ್ದರು.

Post a Comment

Previous Post Next Post