ಷಿಂಗ್ಟನ್: ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಕೊಂಡಿದ್ದು, ಪರಿಸ್ಥಿತಿ ಹದಗೆಡುವುದಕ್ಕೂ ಮುನ್ನ ನೀವು ಕೂಡ ಒಪ್ಪಿಕೊಳ್ಳಿ ಎಂದು ಹಮಾಸ್'ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಲು ಸಿದ್ಧತೆ ನಡೆಸುತ್ತಿರುವ ನಡುವಲ್ಲೇ ಟ್ರಂಪ್ ಅವರು ಹೇಳಿಕೆ ನೀಡಿದ್ದಾರೆ.
ನನ್ನ ಪ್ರತಿನಿಧಿಗಳು ಗಾಜಾ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಇಸ್ರೇಲ್ ಜೊತೆ ದೀರ್ಘ ಮತ್ತು ಆಶಾದಾಯಕ ಮಾತುಕತೆ ನಡೆಸಿದರು. 60 ದಿನಗಳ ಕದನ ವಿರಾಮವನ್ನು ಅಂತಿಮಗೊಳಿಸಲು ಅಗತ್ಯವಾದ ಷರತ್ತುಗಳಿಗೆ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ನಾವು ಯುದ್ಧವನ್ನು ಕೊನೆಗೊಳಿಸಲು ಎಲ್ಲ ದೇಶಗಳೊಂದಿಗೆ ಪ್ರಯತ್ನ ಮಾಡುತ್ತೇವೆ. ಶಾಂತಿಯನ್ನು ತರಲು ಬಹಳ ಶ್ರಮಿಸಿದ ಕತಾರ್ ಮತ್ತು ಈಜಿಫ್ಟ್ ಅಂತಿಮ ಪ್ರಸ್ತಾಪವನ್ನು ನೀಡುತ್ತವೆ. ಪಶ್ಚಿಮ ಏಷ್ಯಾದ ಒಳಿತಿಗಾಗಿ, ಹಮಾಸ್ ಈ ಒಪ್ಪಂದವನ್ನು ಒಪ್ಪಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಇದು ಹೀಗೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಗಾಜಾ ಮೇಲೆ ಇಸ್ರೇಲ್‌ನ ವಾಯುದಾಳಿ ಮುಂದುವರಿದಿದ್ದು, ಸೋಮವಾರ ಸುಮಾರು 50 ವೈಮಾನಿಕ ದಾಳಿ ನಡೆಸಿದೆ. ಪೂರ್ವ ಗಾಜಾ ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಿದೆ,
2023ರ ಅಕ್ಟೋಬರ್ 7ರಿಂದ ನಡೆಯುತ್ತಿರುವ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಈವರೆಗೆ 56 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
Post a Comment