DK Shivakumar ಅಸಹಜ ತಾಳ್ಮೆ ಹಿಂದಿನ ನಿಗೂಢ ಲೆಕ್ಕಾಚಾರ ಏನು? (ಸುದ್ದಿ ವಿಶ್ಲೇಷಣೆ)


 ದೊಂದು ಬಗೆಯ ಅಸಹಜ ತಾಳ್ಮೆ. ಅದರ ಹಿಂದಿರುವ ಲೆಕ್ಕಾಚಾರವನ್ನು ಆಳಕ್ಕಿಳಿದು ನೋಡಿದರೆ ರಾಜಕೀಯ ಚೆದುರಂಗದಾಟದ ವಿಶ್ವರೂಪದ ದರ್ಶನವಾಗುತ್ತದೆ. ಇವರು ಡಿ.ಕೆ.ಶಿವಕುಮಾರ್. ರಾಜ್ಯ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ. ಜತೆಗೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಕೂಡ.

 ಮೂರೂವರೆ ದಶಕಗಳ ರಾಜಕೀಯ ಇತಿಹಾಸವನ್ನು ಹತ್ತಿರದಿಂದ ಗಮನಿಸುತ್ತಾ ಬಂದವರಿಗೆ ಆಕ್ರಮಣಕಾರಿ ಸ್ವಭಾವಕ್ಕೆ ಹೆಸರುವಾಸಿ ಆಗಿರುವ ಅವರೀಗ ಇದ್ದಕ್ಕಿದಂತೆ ಪ್ರಬುದ್ಧ ನಾಯಕನಂತೆ ತಾಳ್ಮೆಯನ್ನು ಮೈಗೂಢಿಸಿಕೊಂಡಿರುವುದರ ಮರ್ಮವಾದರೂ ಏನು? ಎಂಬ ಪ್ರಶ್ನೆ ಪುಟಿದೇಳುವುದು ಸಹಜ.


ಮುಖ್ಯಮಂತ್ರಿ ಪಟ್ಟಕ್ಕೇರಲು ಚಾತಕ ಪಕ್ಷಿಯಂತೆ ಕಾಯುತ್ತಿರುವ ಶಿವಕುಮಾರ್ ನಿಧಾನವಾಗಿ ಬದಲಾಗುತ್ತಿದ್ದಾರೆ. ಅದಕ್ಕೆ ಅಗತ್ಯವಾದ ಮನೋ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಅದರ ಮುಂದುವರಿದ ಭಾಗವೆಂಬಂತೆ ತಮ್ಮ ರಾಜಕೀಯ ಚೆದುರಂಗದಾಟ ಆರಂಬಿಸಿದ್ದು ಅತ್ಯಂತ ಜಾಣ್ಮೆಯಿಂದ ತಮ್ಮ ಕಾಯಿಗಳನ್ನು ನಡೆಸತೊಡಗಿದ್ದಾರೆ. ನಿಜವಾಗಿಯೂ ಅವರು ಬದಲಾಗಿದ್ದಾರೋ ಇಲ್ಲವೋ ಎಂಬುದನ್ನು ನಿಖರವಾಗಿ ಹೇಳಲಾಗದಿದ್ದರೂ ಅವರ ಸೂಕ್ಷ್ಮ ಮತ್ತು ಚೆತುರ ನಡೆ ಪಕ್ಷದೊಳಗೇ ಇರುವ ಅವರ ಎದುರಾಳಿಗಳಿಗೂ ಕಗ್ಗಂಟಾಗಿದೆ.


ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತು. ಸಹಜವಾಗೇ ಪಕ್ಷದ ರಾಜ್ಯಾಧ್ಯಕ್ಷರಾಗಿ ಶಿವಕುಮಾರ್ ಪಾತ್ರವೂ ಈ ಗೆಲುವಿನಲ್ಲಿತ್ತು. ಮುಖ್ಯಮಂತ್ರಿ ಪಟ್ಟಕ್ಕೇರುವ ಮಹತ್ವಾಕಾಂಕ್ಷೆ ಹೊಂದಿದ್ದ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕೆಲವು ತಾಂತ್ರಿ ಕಾರಣಗಳ ಹಿನ್ನಲೆಯಲ್ಲಿ ಸುಮ್ಮನಾಗಿರಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದು ಈಗ ಇತಿಹಾಸ.


ಈ ಸಂದರ್ಭದಲ್ಲಿ ಹೈಕಮಾಂಡ್ ಸಮ್ಮುಖದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂಬುದು ಕಾಂಗ್ರೆಸ್ ಮೂಲಗಳು ನೀಡುವ ಸ್ಪಷ್ಟನೆ.


ಆದರೆ ಇಂತಹ ಯಾವುದೋ ಒಪ್ಪಂದ ಆಗಿಲ್ಲ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರ ಖಚಿತ ನುಡಿ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಗೂಢ ಮೌನಕ್ಕೆ ಶರಣಾಗಿರುವುದೇ ಈ ಗೊಂದಲ ಮುಂದುವರಿಯಲು ಕಾರಣ. ಅದೇನೇ ಇರಲಿ. ಅಕ್ಟೋಬರ್ ನಂತರ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ ಎಂಬುದಾಗಿ ಅವರ ಬೆಂಬಲಿಗರು ಭವಿಷ್ಯ ನುಡಿಯುತ್ತಾರೆ.


ಮುಖ್ಯಮಂತ್ರಿ ಪಟ್ಟದ ಅಧಿಕಾರ ಹಂಚಿಕೆ ವಿಚಾರದಲ್ಲಿ ಶಿವಕುಮಾರ್ ಅತ್ಯಂತ ತಾಳ್ಮೆಯ ಮತ್ತು ನಿಧಾನಗತಿಯ ಹೆಜ್ಜೆ ಇಡುತ್ತಿರುವುದರ ಹಿಂದೆ ಕಾರಣಗಳೂ ಇವೆ. ಅಧಿಕಾರ ಪಡೆಯಲು ಸಿದ್ದರಾಮಯ್ಯ ಜತೆ ಸಂಘರ್ಷಕ್ಕಿಳಿ ಯುವುದಕ್ಕಿಂತ ಅವರ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಅವರ ಮನವೊಲಿಸಿಯೇ ಅಧಿಕಾರ ಪಡೆದುಕೊಳ್ಳುವ ಜಾಣ್ಮೆ ಅವರದ್ದು. ಅದಕ್ಕಾಗಿ ಪಕ್ಷದೊಳಗಿರುವ ಸಿದ್ದರಾಮಯ್ಯ ಬೆಂಬಲಿಗರಿಂದ ಎಷ್ಟೇ ಪ್ರಚೋದನೆ ಎದುರಾಗಲೀ ಅವರು ಆವೇಶದ ಉತ್ತರ ನೀಡುತ್ತಿಲ್ಲ. ಬದಲಾಗಿ ಅದೊಂದು ಮುಖ್ಯ ವಿಚಾರವೇ ಅಲ್ಲ ಎಂಬಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ಅವರ ಈ ನಡೆ ಬೆಂಬಲಿಗರನ್ನೂ ಗೊಂದಲಕ್ಕೆ ತಳ್ಳಿದೆ. ಮೂರುವರೆ ದಶಕಗಳ ರಾಜಕೀಯ ಅನುಭವ ಹೊಂದಿರುವ ಅವರಿಗೆ ಮುಖ್ಯಮಂತ್ರಿ ಅಧಿಕಾರದ ಹೊರತಾಗಿಯೂ ಸಿದ್ದರಾಮಯ್ಯ ರಾಜಕೀಯವಾಗಿ ಪ್ರಬಲ ಶಕ್ತಿ ಎಂಬುದು ಮನವರಿಕೆ ಆಗಿದೆ. ಈವತ್ತಿಗೂ ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯ ಅಚ್ಚುಮೆಚ್ಚು.ಅವರನ್ನು ಸರಿಗಟ್ಟುವ ಮತ್ತೊಬ್ಬ ನಾಯಕ ಕಾಂಗ್ರೆಸ್ ನಲ್ಲೂ ಇಲ್ಲ, ಪ್ರತಿಪಕ್ಷಗಳಲ್ಲೂ ಇಲ್ಲ.

ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುವಾಗ ಶಿವಕುಮಾರ್ ರಾಜಕಾರಣವನ್ನು 'ಚೆಸ್ ಪಂದ್ಯ'ಕ್ಕೆ ಹೋಲಿಸುತ್ತಾರೆ. ರಾಜಕಾರಣದ ಚೆದುರಂಗದಾಟದಲ್ಲಿ ತಮ್ಮ ಕಾಯಿಗಳನ್ನು ಅತ್ಯಂತ ಜಾಣ್ಮೆಯಿಂದ ನಡೆಸುತ್ತಿದ್ದಾರೆ, ಅಧಿಕಾರ ಹಂಚಿಕೆ ಒಪ್ಪಂದವನ್ನು ಜಾರಿಗೊಗೊಳಿಸುವ ವಿಚಾರವನ್ನು ಹೈಕಮಾಂಡ್ ಗೇ ಬಿಟ್ಟಿರುವ ಅವರು ಅಷ್ಟಕ್ಕೇ ಸುಮ್ಮನಾಗದೇ ರಾಜ್ಯ ರಾಜಕಾರಣದಲ್ಲಿ ತಮ್ಮ ಬೇರುಗಳನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸರ್ಕಾರದ ಶಿಷ್ಟಾಚಾರದ ವಿಚಾರದಲ್ಲಿ ಮುಖ್ಯಮಂತ್ರಿಗೆ ಸಮನಾದ ಅಧಿಕಾರವನ್ನು ಚಲಾಯಿಸುತ್ತಿರುವ ಶಿವಕುಮಾರ್ ಇದೀಗ ಸಹಕಾರಿ ರಾಜಕಾರಣಕ್ಕೂ ಪ್ರವೇಶ ಮಾಡಿರುವುದು ಹೊಸ ಬೆಳವಣಿಗೆ. ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕೆಎಂಎಫ್ ಅಧ್ಯಕ್ಷಗಿರಿಯ ಮೇಲೆ ಕಣ್ಣಿಟಿರುವ ಅವರೀಗ ತಮ್ಮ ಸೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಆ ಪಟ್ಟದ ಮೇಲೆ ಕೂರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.


ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ವಿರುದ್ಧ ಭಾರೀ ಮತಗಳ ಅಂತರದಲ್ಲಿ ಪರಾಭವಗೊಂಡ ನಂತರ ಸುರೇಶ್ ರಾಜಕಾರಣದ ಕುರಿತು ವೈರಾಗ್ಯದ ಮಾತುಗಳನ್ನೇ ಆಡುತ್ತಾ ಬಂದಿದ್ದರು. ಆದರೆ ಇದೀಗ ಬೆಂಗಳೂರು ಹಾಲು ಒಕ್ಕೂಟ(ಬಮುಲ್)ದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ಸಹಕಾರಿ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ.


ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯನ್ನೊಳಗೊಂಡಂತೆ ಇರುವ ಬೆಂಗಳೂರು ಹಾಲು ಒಕ್ಕೂಟ ಒಕ್ಕಲಿಗರೇ ಅಧಿಕವಾಗಿರುವ ಪ್ರದೇಶಗಳಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದೆ. ಈ ಸಂಸ್ಥೆಯ ಅಧ್ಯಕ್ಷರಾಗುವ ಮೂಲಕ ಸುರೇಶ್ ರಾಜಕಾರಣದಲ್ಲಿ ಒಂದು ಸುತ್ತಿನ ಮೇಲುಗೈ ಸಾಧಿಸಿದ್ದಾರೆ. ಇನ್ನುಳಿದಂತೆ ಇರುವುದು ಕೆಎಂಎಫ್ ಅಧ್ಯಕ್ಷ ಗಿರಿಯ ಕನಸನ್ನು ನನಸು ಮಾಡಿಕೊಳ್ಳುವುದು ಮಾತ್ರ. ಒಟ್ಟು 16 ಜಿಲ್ಲಾ ಹಾಲು ಒಕ್ಕೂಟಗಳನ್ನು ಒಳಗೊಂಡಿರುವ ಕೆಎಂಎಫ್ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿದೆ. ಇದರ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದರೆ ಹಳೇ ಮೈಸೂರು ಪ್ರಾಂತ್ಯದ ಜತೆಗೇ ಇಡೀ ರಾಜ್ಯದ ರಾಜಕಾರಣದ ಹಿಡಿತ ಸಿಗುತ್ತದೆ.


ಹಾಲು ಉತ್ಪಾದಕರ ಒಕ್ಕೂಟಗಳು, ಗ್ರಾಮೀಣ ಪ್ರದೇಶದಲ್ಲಿರುವ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೇಲೆ ಹಿಡಿತ ಸಾಧಿಸಬಹುದು, ಜತೆಗೇ ರಾಜ್ಯದಲ್ಲಿ ಬೇರು ಮಟ್ಟದಲ್ಲಿ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳಬಹುದು, ಬೆಂಬಲಿಗರ ಪಡೆ ಸೃಷ್ಟಿಸಿಕೊಳ್ಳಲೂಬಹುದು. ಇದು ಈ ಸೋದರರ ಲೆಕ್ಕಾಚಾರ.


ರಾಜ್ಯದ ಹಾಲು ಒಕ್ಕೂಟಗಳ ಪೈಕಿ ಕೆಲವು ಒಕ್ಕೂಟಗಳ ಚುನಾವಣೆ ಮುಗಿದಿದೆ. ಕೆಲವು ಕಾನೂನಾತ್ಮಕ ಸಮಸ್ಯೆಗಳಿಂದ ಮುಂದಕ್ಕೆ ಹೋಗಿದೆ. ಏನೇ ಆದರೂ ಜುಲೈ ಮಧ್ಯಭಾಗದಲ್ಲಿ ಕೆಎಂಎಫ್ ಅಧ್ಯಕ್ಷರ ಚುನಾವಣೆ ನಡೆಯುವುದು ಖಚಿತ.ಚುನಾಯಿತ ನಿರ್ದೇಶಕರುಗಳ ಜತೆಗೇ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರೂ ಮತ ಚಲಾಯಿಸಬೇಕಿರುವುದರಿಂದ ಅಧ್ಯಕ್ಷರ ಆಯ್ಕೆ ಮುಖ್ಯಮಂತ್ರಿಯ ಮರ್ಜಿ ಅನುಸರಿಸಿ ನಡೆಯುತ್ತದೆ.

Post a Comment

Previous Post Next Post