ಗಳೂರು: ಕನ್ನಡ ತಮಿಳಿನಿಂದ ಹುಟ್ಟಿರುವುದು ಎಂದು ನಟ ಕಮಲ್ ಹಾಸನ್ ಶನಿವಾರ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್ ತಮಿಳು ಭಾಷೆಯನ್ನು ಹಾಡಿ ಹೊಗಳಿದ್ದರು.
ಚಿತ್ರರಂಗಕ್ಕೆ ರಾಜ್‌ಕುಮಾರ್ ಕುಟುಂಬ, ಶಿವರಾಜ್‌ಕುಮಾರ್ ಕೊಡುಗೆಗಳನ್ನು ಶ್ಲಾಘಿಸಿದ ಅವರು, ರಾಜ್‌ಕುಮಾರ್ ಕುಟುಂಬದ ಜತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದರು. ಕನ್ನಡ ಭಾಷೆ ತಮಿಳಿನಿಂದಲೇ ಹುಟ್ಟಿರುವುದು, ತಮಿಳು ಮೂಲ ಭಾಷೆ ಎಂಬ ಅರ್ಥದಲ್ಲಿ ಮಾತನಾಡಿದ್ದರು. ನಟ ಶಿವರಾಜ್ ಕುಮಾರ್ ಕೂಡ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರ ಎದುರೇ ಕನ್ನಡವನ್ನು ತಮಿಳಿನೊಂದಿಗೆ ಹೋಲಿಸಿರುವುದು ವಿವಾದಕ್ಕೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಮಲ್ ಹಾಸನ್ ಮಾತಿನ ವಿಡಿಯೊ ಹರಿದಾಡಿದ್ದು, ಭಾರಿ ವಿರೋಧ ವ್ಯಕ್ತವಾಗಿದೆ.
ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಜೂ.5ರಂದು ತೆರೆ ಕಾಣುತ್ತಿದೆ. ಅದರ ಪ್ರಚಾರ ಕಾರ್ಯಕ್ಕಾಗಿ ಕಮಲ್ ಹಾಸನ್ ಮತ್ತು ಚಿತ್ರತಂಡ ಮಂಗಳವಾರ ಬೆಂಗಳೂರಿಗೆ ಬಂದಿತ್ತು.
ಇದರ ಬೆನ್ನಲ್ಲೇ ಅವರು ಶನಿವಾರ ಮಾತನಾಡಿದ ವಿಡಿಯೊ ಹರಿಬಿಟ್ಟು ವಿವಾದ ಸೃಷ್ಟಿಯಾಗಿದೆ. ಆದರೆ ಹೆಗಡೆ ನಗರದಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ಕೆ ಯಾವುದೇ ತೊಂದರೆ ಆಗಲಿಲ್ಲ.
'ಭಾಷಾ ದುರಭಿಮಾನ ಸಂಸ್ಕೃತಿ ಹೀನ ನಡವಳಿಕೆ'-ಮನು ಬಳಿಗಾರ್
'ಮಾತೃಭಾಷೆಯನ್ನು ಪ್ರೀತಿಸಬೇಕು. ಆದರೆ, ಅದರ ಹೆಸರಿನಲ್ಲಿ ದುರಾಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.
ಭಾಷೆ ಬಗೆಗೆ ಕಮಲ್ ಹಾಸನ್ ಅವರ ಹೇಳಿಕೆ ಖಂಡಿಸಿರುವ ಅವರು, 'ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಸ್ವತಂತ್ರ ಲಿಪಿ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡವಾಗಿದೆ. ಕೋಟ್ಯಂತರ ಕರುನಾಡಿಗರ ಜೀವನಾಡಿಯಾಗಿರುವ ಹೆಮ್ಮೆಯ ಕನ್ನಡ ಭಾಷೆಗೆ ನಟ ಕಮಲ್ ಹಾಸನ್ ಅವರು ಅವಮಾನಿಸಿದ್ದಾರೆ. ಕಲೆಗೆ ಯಾವುದೇ ಭಾಷೆಯ ಹಂಗಿಲ್ಲ. ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನು ಗೌರವಿಸುವ ಸಾಮಾನ್ಯ ಸಂಸ್ಕಾರ ಇರಬೇಕು' ಎಂದು ಹೇಳಿದ್ದಾರೆ.
'ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅಭಿನಯಿಸಿರುವ ನಟ ಕಮಲ್ ಹಾಸನ್ ಆಡಿರುವುದು ದುರಹಂಕಾರದ ಮಾತುಗಳು. ತಮಿಳು ಭಾಷೆಯನ್ನು ವೈಭವೀಕರಿಸುವ ಮತ್ತಿನಲ್ಲಿ ಕನ್ನಡ ಭಾಷೆಯನ್ನು ಅಪಮಾನಿಸಿರುವ ಮೂಲಕ ಅವರು ಉದ್ಧಟತನ, ದುರಹಂಕಾರ ಮೆರೆದಿದ್ದಾರೆ. ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಕಮಲ್ ಹಾಸನ್‌ಗೆ ಮಾಹಿತಿ ಕೊರತೆ ಇದೆ'-ಮಹೇಶ ಜೋಶಿ
'ತಮ್ಮ ಭಾಷೆಯ ಮೇಲಿನ ಅಭಿಮಾನದಿಂದಲೊ, ಮಾಹಿತಿಯ ಕೊರತೆಯಿಂದಲೊ ನಟ ಕಮಲ್ ಹಾಸನ್ ಅವರು ತಮಿಳಿನಿಂದ ಕನ್ನಡ ಭಾಷೆ ಬಂದಿದೆಯೆಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವಂತಿದೆ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.
'ಕನ್ನಡವು ಪರಿಪೂರ್ಣ ಭಾಷೆ ಎಂಬ ಹೆಗ್ಗಳಿಕೆ ಪಡೆದಿದೆ. ತನ್ನದೇ ಆದ ಲಿಪಿ, ಅಂಕಿಗಳು, ವ್ಯಾಕರಣವನ್ನು ಹೊಂದಿದೆ. ಇಲ್ಲಿ ಬರಹಕ್ಕೂ ಉಚ್ಚಾರಣೆಗೂ ನೇರ ಸಂಬಂಧವಿದೆ. ಜಗತ್ತಿನಲ್ಲಿಯೇ ಇಂತಹ ಸ್ವಂತಿಕೆಯನ್ನು ಹೊಂದಿರುವ ಭಾಷೆಗಳು ಬೆರಳಣಿಕೆಯಷ್ಟು. ತಮಿಳಿಗೆ ಇಂತಹ ಹೆಗ್ಗಳಿಕೆಯಿಲ್ಲ. ಹೀಗಾಗಿ, ಕನ್ನಡಿಗರು ಈ ಕುರಿತು ಪ್ರತಿಕ್ರಿಯಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ' ಎಂದರು.
'ಮೂಲ ದ್ರಾವಿಡ ಭಾಷೆಯಿಂದ ಮೂಡಿಬಂದ ಪ್ರಮುಖ ನುಡಿಗಳಲ್ಲಿ ತಮಿಳಿನಂತೆ ಕನ್ನಡವೂ ಒಂದು. ಅದನ್ನು ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿಸಲಾಗಿದೆ. ಯಾವುದೇ ಭಾಷೆಯು, ತನ್ನದೇ ಆದ ಸ್ವತಂತ್ರ ರೂಪವನ್ನು ಪಡೆದುಕೊಳ್ಳುವ ಕಾರ್ಯವು ನೂರಾರು ವರ್ಷಗಳ ಕಾಲ ನಡೆದಿರುತ್ತದೆ' ಎಂದು ಹೇಳಿದ್ದಾರೆ.
'ತಮಿಳಿನಿಂದ ಕನ್ನಡ ಹುಟ್ಟಿಲ್ಲ'-ಪುರುಷೋತ್ತಮ ಬಿಳಿಮಲೆ
'ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿಲ್ಲ ಎಂದು ವಿ.ಐ. ಸುಬ್ರಮಣಿಯನ್ ಮೊದಲಾದ ತಮಿಳಿನ ಭಾಷಾ ವಿಜ್ಞಾನಿಗಳೇ ಹೇಳಿದ್ದನ್ನು ನಟ ಕಮಲ್ ಹಾಸನ್ ಗಮನಿಸಿದಂತಿಲ್ಲ. ದ್ರಾವಿಡ ಭಾಷಾ ಕುಟುಂಬದಲ್ಲಿ 130ಕ್ಕೂ ಹೆಚ್ಚು ಭಾಷೆಗಳಿವೆ. ಈ ಎಲ್ಲ ಭಾಷೆಗಳಿಗೂ ಮೂಲ ಆಗಿರಬಹುದಾದ ಪ್ರಾಗ್ದ್ರಾವಿಡ ಭಾಷೆಯೊಂದನ್ನು (ಇದನ್ನು ಮೂಲ ದ್ರಾವಿಡ ಭಾಷೆ ಎಂದೂ ಕರೆಯಲಾಗಿದೆ) ಭಾಷಾ ವಿಜ್ಞಾನಿಗಳು ಪುನರ್ ರಚಿಸಿದ್ದಾರೆ. ಕಾಲಾಂತರದಲ್ಲಿ ದ್ರಾವಿಡ ಭಾಷಾ ಗುಂಪಿನ ಜನರು ಬೇರೆ ಬೇರೆ ಕಡೆಗಳಲ್ಲಿ ಪಸರಿಸಿಕೊಂಡಾಗ ಭಾಷೆಯೂ ಸ್ವತಂತ್ರವಾಗಿ ಬೆಳೆಯತೊಡಗಿತು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಕಮಲ್ ಹಾಸನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, 'ಮೂಲ ದ್ರಾವಿಡದಿಂದ ಮೊದಲು ಬೇರೆಯಾದ ಭಾಷೆ ಕುಯಿ ಮತ್ತು ತಮಿಳು. ಅವು ಇವತ್ತಿಗೂ ಮೂಲ ದ್ರಾವಿಡ ಭಾಷೆಯ ಅನೇಕ ಗುಣ ಲಕ್ಷಣಗಳನ್ನು ಹೊಂದಿವೆ. ಆಮೇಲೆ ತುಳು, ತದನಂತರ ಕನ್ನಡ, ತೆಲುಗು, ಮಲೆಯಾಳಂ ಹೀಗೆ ಬೇರೆ ಬೇರೆ ಭಾಷೆಗಳು ಬೆಳೆದವು. ಇವುಗಳದು ಸೋದರ ಸಂಬಂಧವೇ ಹೊರತು ತಾಯಿ ಮಕ್ಕಳ ಸಂಬಂಧವಲ್ಲ' ಎಂದು ಹೇಳಿದ್ದಾರೆ.
Post a Comment