rump Tariffs: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸುಂಕ ಸಮರ ಇದೀಗ ಆಯಪಲ್ ಸಂಸ್ಥೆ ಮೇಲೆ ತಿರುಗಿದೆ. ಇತ್ತೀಚೆಗಷ್ಟೇ ಐಫೋನ್‌ಗಳ ತಯಾರಿಕೆಯ ಬಗ್ಗೆ ಮಾತನಾಡಿದ ಟ್ರಂಪ್, ಮತ್ತೊಮ್ಮೆ ಆಯಪಲ್‌ಗೆ ಎಚ್ಚರಿಕೆ ರವಾನಿಸಿದ್ದಾರೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಇಲ್ಲಿಯೇ ತಯಾರಿಸಬೇಕೇ ವಿನಃ ಭಾರತದಲ್ಲಿ ಅಥವಾ ಇನ್ಯಾವುದೋ ದೇಶಗಳಲ್ಲಿ ಅಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಟ್ರಂಪ್ ಸುಂಕ ಸಮಾಚಾರ
ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಂಪ್, ಆಯಪಲ್ ಸಿಇಒ ಟಿಮ್ ಕುಕ್ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ. ಭಾರತದಲ್ಲಿ ಐಫೋನ್ ಉತ್ಪಾದನಾ ಘಟಕಗಳನ್ನು ನಿರ್ಮಿಸದಂತೆ ಎಚ್ಚರಿಕೆ ನೀಡಿರುವುದಾಗಿ ವರದಿಗಳು ತಿಳಿಸಿವೆ. ಟ್ರಂಪ್ ಅಮೆರಿಕದಲ್ಲಿ ಐಫೋನ್‌ಗಳನ್ನು ತಯಾರಿಸುವಂತೆ ತಂತ್ರಜ್ಞಾನ ಕಂಪನಿಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿರುವುದು ಸ್ಪಷ್ಟ. ಸಂಸ್ಥೆಯು ಸುಂಕವಿಲ್ಲದೆ ತನ್ನ ಉತ್ಪನ್ನಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿರುವುದು ಇದೀಗ ಹಲವರ ಹುಬ್ಬೇರಿಸಿದೆ.
ಆಯಪಲ್ ಸಂಸ್ಥೆಗೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ಕೊಡುತ್ತಿದ್ದಂತೆ ಸಂಸ್ಥೆಯ ಷೇರುಗಳು ಶುಕ್ರವಾರ ಶೇ.2.5ರಷ್ಟು ಕುಸಿಯಿತು. ಈ ಸಂದರ್ಭದಲ್ಲಿ, ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (ಜಿಟಿಆರ್‌ಐ) ತನ್ನ ವರದಿಯಲ್ಲಿ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದ್ದು, ಭಾರತದಲ್ಲಿ ತಯಾರಾಗುವ ಐಫೋನ್‌ಗಳು ಯುಎಸ್ಗಿಂತಲೂ ಅಗ್ಗ ಎಂಬ ಅಚ್ಚರಿ ಸಂಗತಿಯನ್ನು ಬಿಚ್ಚಿಟ್ಟಿದೆ.
ಯುಸ್ಗಿಂತಲೂ ಅಗ್ಗ?
ಭಾರತದಲ್ಲಿ ತಯಾರಾದ ಐಫೋನ್‌ಗಳ ಮೇಲಿನ ಅಮೆರಿಕದ ಸುಂಕಗಳ ಹೊರತಾಗಿಯೂ, ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುವ ವೆಚ್ಚವು ಅಮೆರಿಕಗಿಂತ ಇನ್ನೂ ಕಡಿಮೆ ಎಂದು ಜಿಟಿಆರ್‌ಐ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಭಾರತದಲ್ಲಿ ಕಡಿಮೆ ಉತ್ಪಾದನಾ ವೆಚ್ಚ ಮತ್ತು ಸರ್ಕಾರದ ಪ್ರೋತ್ಸಾಹಗಳು ಇದಕ್ಕೆ ಕಾರಣವಾಗಿವೆ ಎಂದು ತಿಳಿಸಿದೆ.
GTRI ವರದಿಯಲ್ಲಿ ಉಲ್ಲೇಖಗೊಂಡ ವಿಷಯಗಳಿವು
1,000 ಡಾಲರ್ ಬೆಲೆಯ ಐಫೋನ್‌ನಲ್ಲಿ, ಆಯಪಲ್ ಬ್ರ್ಯಾಂಡ್, ಸಾಫ್ಟ್‌ವೇರ್ ಮತ್ತು ವಿನ್ಯಾಸ ಪಾಲು 450 ಡಾಲರ್.
ಅಮೇರಿಕನ್ (ಕ್ವಾಲ್ಕಾಮ್. ಬ್ರಾಂಡ್ ಕಾಮ್) ಘಟಕಗಳ ಪಾಲು 80 ಡಾಲರ್.
ತೈವಾನೀಸ್ ಚಿಪ್‌ಗಳ ಪಾಲು 150 ಡಾಲರ್.
ದಕ್ಷಿಣ ಕೊರಿಯಾದ OLED ಪರದೆಗಳು ಮತ್ತು ಮೆಮೊರಿ ಚಿಪ್‌ಗಳ ಪಾಲು 90 ಡಾಲರ್.
ಜಪಾನಿನ ಕ್ಯಾಮೆರಾ ವ್ಯವಸ್ಥೆಗಳ ಪಾಲು 85 ಡಾಲರ್.
ಜರ್ಮನಿ, ವಿಯೆಟ್ನಾಂ ಮತ್ತು ಮಲೇಷ್ಯಾದ ಸಣ್ಣ ಭಾಗಗಳ ಪಾಲು ಸುಮಾರು 45 ಡಾಲರ್.
ಚೀನಾ ಮತ್ತು ಭಾರತದಲ್ಲಿ ಜೋಡಿಸಿದರೂ, ಪ್ರತಿ ಫೋನ್‌ನ ಬೆಲೆ ಕೇವಲ 30 ಡಾಲರ್. ಇದು ಐಫೋನ್‌ನ ಚಿಲ್ಲರೆ ಬೆಲೆಯ ಶೇ.3ಕ್ಕಿಂತ ಕಡಿಮೆ.
ಶೇ.25ರಷ್ಟು ಸುಂಕ ವಿಧಿಸಿದ್ರೂ ಏಕಿಲ್ಲ ಸಮಸ್ಯೆ?
ಭಾರತದಲ್ಲಿ ಐಫೋನ್ ಜೋಡಿಸುವ ವೆಚ್ಚ 30 ಡಾಲರ್. ಅದೇ ಅಮೆರಿಕದಲ್ಲಿ 390 ಡಾಲರ್.
ಭಾರತದಲ್ಲಿ ಕಾರ್ಮಿಕರ ಸರಾಸರಿ ಮಾಸಿಕ ವೇತನ 230 ಡಾಲರ್ (ಸುಮಾರು 19 ಸಾವಿರ ರೂ.)
ಅಮೆರಿಕದಲ್ಲಿ (ಕ್ಯಾಲಿಫೋರ್ನಿಯಾದಂತಹ ರಾಜ್ಯಗಳಲ್ಲಿ) ಇದು 2,900 ಡಾಲರ್ (ಸುಮಾರು 2.4 ಲಕ್ಷ).
ಇದು ಭಾರತಕ್ಕಿಂತ ಅಮೆರಿಕದಲ್ಲಿ 13 ಪಟ್ಟು ಹೆಚ್ಚಿದೆ.
ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಸರ್ಕಾರವು ಉತ್ಪನ್ನ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಸಹ ನೀಡುತ್ತದೆ.
ಟ್ರಂಪ್ ನುಡಿದಂತೆ ಅಮೆರಿಕ ಭಾರತದಲ್ಲಿ ತಯಾರಿಸಿದ ಐಫೋನ್‌ಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದರೆ, ಆಯಪಲ್ ಭಾರತದಲ್ಲಿ ಫೋನ್‌ಗಳನ್ನು ತಯಾರಿಸುವ ಮೂಲಕ ಹಣವನ್ನು ಉಳಿಸುತ್ತದೆ. ಇದು ಲಾಜಿಕ್ನಂತೆ ಕಾಣಿಸಿದರೂ ಮುಂದಿನ ಸವಾಲುಗಳು ಹೇಗಿರಬಹುದು ಎಂಬುದು ಕಾಡುವ ಪ್ರಶ್ನೆಯೇ,(ಏಜೆನ್ಸೀಸ್).

Post a Comment