Ramzan: ಆತ್ಮಶುದ್ಧಿಯ ಭಾವ ಬೆಸೆವ ರಂಜಾನ್‌


 ಸ್ಲಾಂನಲ್ಲಿ ಅತ್ಯಂತ ಪವಿತ್ರ ಮಾಸ ಎಂದು ಕರೆಸಿಕೊಳ್ಳುವ “ರಂಜಾನ್‌’ ಆರಂಭವಾಗಿದೆ. ಉಪವಾಸದ ಜೊತೆಜೊತೆಗೆ ಅನಾಚಾರ, ದ್ವೇಷ, ವೈಮನಸ್ಸು ಕೊನೆಗಾಣಿಸಿ, ಸ್ನೇಹ,

ಪ್ರೀತಿ, ಭ್ರಾತೃತ್ವ ಹೆಚ್ಚಿಸುವ ಸಂದೇಶ ಸಾರುತ್ತದೆ ಈ ಹಬ್ಬ. ರಂಜಾನ್‌ ಮಾಸದ ಈ ಸಂದರ್ಭದಲ್ಲಿ ಅದರ ವೈಶಿಷ್ಟ್ಯತೆಯ ಒಂದು ನೋಟ ಇಲ್ಲಿದೆ.

ಮುಸ್ಲಿಮರ ಪವಿತ್ರ ತಿಂಗಳಾದ ರಂಜಾನ್‌ ಆಗಮಿಸಿದೆ. ರಂಜಾನ್‌ ತಿಂಗಳೆಂದರೆ ಉಪವಾಸದ ಮಾಸ. ಈ ಮಾಸದಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಹನಿ ನೀರನ್ನೂ ಮುಟ್ಟದೇ ಉಪವಾಸವಿರುತ್ತಾರೆ. ಕಾಮ, ಕ್ರೋಧ, ಮದ, ಮತ್ಸರ ತೊರೆದು ಪುಣ್ಯ ಕರ್ಮಗಳ ಜೊತೆಗೆ ದೇವಾರಾಧನೆಯಲ್ಲಿ ಅತೀ ಹೆಚ್ಚು ಸಮಯ ಕಳೆಯುತ್ತಾರೆ. ರಂಜಾನ್‌, ಇಸ್ಲಾಮಿಕ್‌ ಕ್ಯಾಲೆಂಡರಿನ ಒಂಭತ್ತನೆಯ ತಿಂಗಳು. ಇಸ್ಲಾಮಿನ ಪವಿತ್ರ ಗ್ರಂಥ ಕುರ್‌ಆನ್‌ ಅವತರಣೆಯಾದ ಮಾಸ ಇದು ಎಂಬ ನಂಬಿಕೆಯೂ ಮುಸ್ಲಿಮರದ್ದು.

ಇಸ್ಲಾಮಿನ ಐದು ಕಡ್ಡಾಯ ನಿಯಮಗಳಲ್ಲಿ ರಂಜಾನ್‌ ಉಪವಾಸವೂ ಒಂದು. ಈ ತಿಂಗಳಲ್ಲಿ ಒಂದು ಪುಣ್ಯಕರ್ಮವೆಸಗಿದರೆ ಅದಕ್ಕೆ ಇತರ ತಿಂಗಳಲ್ಲಿ ಮಾಡಿದ ಕಡ್ಡಾಯ ಕರ್ಮಗಳ ಪ್ರತಿಫಲ ಸಿಗಲಿದೆ. ಒಂದು ಕಡ್ಡಾಯ ಕರ್ಮ ಮಾಡಿದರೆ, ಇತರ ತಿಂಗಳ ಎಪ್ಪತ್ತು ಕಡ್ಡಾಯ ಕರ್ಮಗಳ ಪ್ರತಿಫಲ ದೊರೆಯುವುದು ಎಂಬುದು ಮುಸ್ಲಿಮರ ನಂಬಿಕೆ. ಈ ತಿಂಗಳಲ್ಲಿ “ತೌಬಾ’ ಮಾಡುವುದು ಅಂದರೆ, ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಪಶ್ಚಾತ್ತಾಪಪಡುವುದು… ಜೊತೆಗೆ ಸಂಬಂಧಿಕರು, ಸ್ನೇಹಿತರು, ನೆರೆಹೊರೆಯವರೊಡನೆ ಯಾವುದಾದರೂ ಕಾರಣಕ್ಕೆ ವೈಮನಸ್ಸು ಉಂಟಾಗಿದ್ದರೆ ಮಾತನಾಡುವ ಮೂಲಕ ಅಥವಾ ಕ್ಷಮೆಯಾಚಿಸುವ ಮೂಲಕ ವೈಮನಸ್ಸನ್ನು ಕೊನೆಗೊಳಿಸುವುದು. ನಮ್ಮ ಮನೆಮಂದಿಯ ಹಾಗೂ ಬಂಧುಬಳಗದವರ ಆರೋಗ್ಯಕ್ಕಾಗಿ ಪ್ರಾರ್ಥನೆ, ಅನಾರೋಗ್ಯ ಅಥವಾ ಇನ್ನಾವುದೋ ಕಾರಣಕ್ಕೆ ಉಪವಾಸ ಬಾಕಿಯಿದ್ದರೆ ಅದನ್ನು ತೀರಿಸುವುದು. ಆಂತರಿಕ ಹಾಗೂ ಬಾಹ್ಯ ಶುಚಿತ್ವದ ಕಡೆಗೆ ಗಮನ ನೀಡುವುದು. ಮನೆ ಹಾಗೂ ಸುತ್ತಮುತ್ತಲಿನ ಪರಿಸರದ ಸ್ವತ್ಛತೆಯ ಜೊತೆಗೆ ಹೃದಯ ಶುದ್ಧೀಕರಣ ಕೂಡಾ ಕೈಗೊಳ್ಳಬೇಕು. ದೇವಭಯ ಹೊಂದುವುದು, ಕೆಟ್ಟ ಅಭ್ಯಾಸ ಹಾಗೂ ಚಿಂತನೆಗಳಿಂದ ದೂರವಿರುವುದು, ದ್ವೇಷವನ್ನು ತೊರೆಯುವುದು ಇವೆಲ್ಲಾ ರಂಜಾನ್‌ ತಿಂಗಳಲ್ಲಿ ಮುಸ್ಲಿಮರು ಪಾಲಿಸಲೇಬೇಕಾದ ಅಂಶಗಳು.

ಉಳ್ಳವರಿಗೆ ಹಸಿವಿನ ಮೌಲ್ಯ ಹಾಗೂ ಬಡವರ ಬವಣೆಯ ಬಗ್ಗೆ ತಿಳಿಸುವುದು ಕೂಡಾ ಈ ತಿಂಗಳ ಮಹತ್ವವಾಗಿದೆ. “ನೆರೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ’ ಎಂಬ ಪ್ರವಾದಿ ಮುಹಮ್ಮದ್‌ರ ವಚನವನ್ನು ಇಲ್ಲಿ ಸ್ಮರಿಸಬಹುದು. ಹಸಿವು ಹೇಗಿರುತ್ತದೆ ಎಂಬುದರ ಜೊತೆಗೆ ಬಡಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲು ರಂಜಾನ್‌ ಮಾಸ ಪ್ರೇರಣೆ ನೀಡುತ್ತದೆ.

ದಾನ-ಧರ್ಮಕ್ಕೆ ಆದ್ಯತೆ:

ಶ್ರೀಮಂತರು ತಮ್ಮ ಸಂಪತ್ತಿನ ಶೇಕಡಾ 2.5ರಷ್ಟು ಭಾಗವನ್ನು ದಾನವಾಗಿ ನೀಡಬೇಕು ಎಂಬುದು ಮುಸ್ಲಿಮರಿಗೆ ಇಸ್ಲಾಂ ವಿಧಿಸಿರುವ ಷರತ್ತು. ಅತೀ ಹೆಚ್ಚು ಪುಣ್ಯ ಲಭಿಸುವ ಮಾಸ ಎಂಬ ಕಾರಣಕ್ಕಾಗಿ ಈ ತಿಂಗಳಲ್ಲಿ ದಾನ ಧರ್ಮವೂ ಯಥೇತ್ಛವಾಗಿ ನಡೆಯುತ್ತದೆ. “ಝಕಾತ್‌’ ಎಂಬ ದಾನ ನೀಡುವ ಪ್ರಕ್ರಿಯೆ ಯಲ್ಲಿ ಪ್ರಥಮ ಪ್ರಾಶಸ್ತÂ ನೆರೆಹೊರೆಯವರಿಗಾಗಿರುತ್ತದೆ. ನಂತರ ಕುಟುಂಬದ ಬಡವರು ಹಾಗೂ ಇತರರಿಗೆ ಮೀಸಲಿಡಲಾಗುತ್ತದೆ. ನೆರೆಹೊರೆಯವರಿಗೆ ಇಸ್ಲಾಮ್‌ ನೀಡಿರುವ ಮಹತ್ವವನ್ನು ಇದು ತಿಳಿಸುತ್ತದೆ. ಇದರೊಂದಿಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು, ಕೆಟ್ಟ ವಿಚಾರ, ಕೆಟ್ಟ ಕೆಲಸ ಮಾಡದಿರುವುದು, ತಮ್ಮ ಸುತ್ತಲಿನವರನ್ನು ಸಹೋದರತ್ವದಿಂದ ಕಾಣುವುದು, ಮಾನವೀಯತೆಯ ಮೌಲ್ಯ ಎತ್ತಿಹಿಡಿಯುವುದು ರಂಜಾನ್‌ ಮಾಸದ ಪ್ರಧಾನ ತಿರುಳಾಗಿದೆ. ಒಟ್ಟಿನಲ್ಲಿ ಮನುಷ್ಯನನ್ನು ಕೆಡುಕಿನತ್ತ ಒಯ್ಯುವ ಎಲ್ಲಾ ಬಾಗಿಲು ಮುಚ್ಚಿ, ಒಳಿತಿನತ್ತ ಕೊಂಡೊಯ್ಯುವ ಮಾಸವಾಗಿದೆ ರಂಜಾನ್‌.

ಹೇಗಿರುತ್ತದೆ ರಂಜಾನ್‌ ಉಪವಾಸ? :

ರಂಜಾನ್‌ ತಿಂಗಳಲ್ಲಿ ಬೆಳಗ್ಗೆ ಸೂರ್ಯೋದಯಕ್ಕೆ ಕೊಡುವ ಆಜಾನ್‌ಗಿಂತ ಮೊದಲು “ಸಹರಿ’ ಎನ್ನುವ ಹೆಸರಿನಲ್ಲಿ ಲಘು ಆಹಾರ ಸೇವನೆ ಮಾಡಲಾಗುತ್ತದೆ. ನಂತರ ಹನಿ ನೀರನ್ನೂ ಮುಟ್ಟದೆ ಇಡೀ ದಿನ ಉಪವಾಸವಿದ್ದು ಸೂರ್ಯಾಸ್ತದ (ಮಗ್ರಿಬ್‌)

ಆಜಾನ್‌ ಸಮಯದಲ್ಲಿ ಉಪವಾಸ ತೊರೆಯುತ್ತಾರೆ. ಇದಕ್ಕೆ “ಇಫ್ತಾರ್‌’

ಎನ್ನುತ್ತಾರೆ. ಉಪವಾಸ ತೊರೆಯಲು ಮುಸ್ಲಿಮರು ಖರ್ಜೂರ ಹಾಗೂ ಬಿಸಿ ನೀರನ್ನು ಬಳಸುತ್ತಾರೆ. ನಂತರ ಪ್ರಾರ್ಥನೆ ಮುಗಿಸಿ ರಾತ್ರಿಯ ಹೊತ್ತು “ತರಾವೀಹ್‌’ ಎಂಬ ಸಾಮೂಹಿಕ ಪ್ರಾರ್ಥನೆಯನ್ನು ತಿಂಗಳಿಡೀ ನಿರ್ವಹಿಸುತ್ತಾರೆ. ಮುಸ್ಲಿಮರಿಗೆ ಇದೊಂದು ತರಬೇತಿಯ ತಿಂಗಳಾಗಿದ್ದು, ಸಮಯ ಪರಿಪಾಲನೆ, ಉಪವಾಸ ವ್ರತಾಚರಣೆ, ಮನಸಿನ ನಿಗ್ರಹವೂ ಕೂಡಾ ಈ ತಿಂಗಳಲ್ಲಿ ಮಹತ್ವ ಪಡೆದುಕೊಂಡಿದೆ. ಇದೇ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿ ಒಂದು ರಾತ್ರಿಯು ಅತೀ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. “ಲೈಲತುಲ್‌ ಖದ್ರ್’ ಎನ್ನುವ ಈ ರಾತ್ರಿಗೆ ಸಾವಿರ ರಾತ್ರಿಗಳ ಪುಣ್ಯಪ್ರತಿಫಲವಿದೆ ಎನ್ನುವುದು ನಂಬಿಕೆ. ರಂಜಾನ್‌ ಎಲ್ಲ ಕೆಡುಕು ತೊರೆದು ಆತ್ಮ ಶುದ್ಧೀಕರಿಸುವ ತಿಂಗಳಾಗಿದೆ.

ಆತ್ಮಶುದ್ಧಿಯ ಜೊತೆಗೆ ಎಲ್ಲರೊಡನೆ ಪ್ರೀತಿ, ವಿಶ್ವಾಸ, ಭ್ರಾತೃತ್ವ ಬೆಳೆಸುವ ತಿಂಗಳಾದ ರಂಜಾನ್‌ ಸೌಹಾರ್ದತೆ ಮೂಡಿಸಿ, ಸಮಾಜದಲ್ಲಿ ಎದ್ದು ನಿಂತಿರುವ ಬೇಧದ ಗೋಡೆಗಳನ್ನು ಒಡೆದು ಸ್ನೇಹದ ಸೇತುವೆಯನ್ನು ನಿರ್ಮಿಸಲಿ, ಮನಸಿನ ಕಲ್ಮಶ ಕರಗಿಸಲಿ ಎಂಬುದೆ ಹಾರೈಕೆ.

ಉಪವಾಸದಿಂದ ಯಾರಿಗೆ ವಿನಾಯ್ತಿ?:

ಮಕ್ಕಳು, ಬಾಣಂತಿಯರು, ಮುಟ್ಟಾದ ಮಹಿಳೆಯರು ಹಾಗೂ ರೋಗಿಗಳಿಗೆ ಉಪವಾಸದಿಂದ ರಿಯಾಯಿತಿಯಿರುತ್ತದೆ. ಮಕ್ಕಳನ್ನು ಹೊರತುಪಡಿಸಿ ಇತರರು ರಂಜಾನ್‌ ಮಾಸದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಉಪವಾಸ ವ್ರತ ಕೈಗೊಳ್ಳಲು ಸಾಧ್ಯವಾಗದೇ ಇದ್ದರೆ, ಅವರು ವರ್ಷದ ಇತರ ದಿನಗಳಲ್ಲಿ ಉಪವಾಸ ಮಾಡಿ ಆ ಬಾಕಿಯನ್ನು ತೀರಿಸಲು ಅವಕಾಶವಿದೆ. ಒಂದು ವೇಳೆ ನಿಗದಿಪಡಿಸಿದ ಸಮಯಕ್ಕೆ ಈ ಉಪವಾಸ ತೀರಿಸಲು ಸಾಧ್ಯವಾಗದಿದ್ದರೆ ದಿನಕ್ಕೆ 600 ಗ್ರಾಂನಂತೆ ಅಕ್ಕಿಯನ್ನು ಉಪವಾಸದ ಬದಲಿಗೆ ಬಡವರಿಗೆ ದಾನವಾಗಿ ನೀಡಬಹುದು.

Post a Comment

Previous Post Next Post