ರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣ ಫಲಾನುಭವಿಗಳಿಗೆ ಸಕಾಲಕ್ಕೆ ಕೈಸೇರುತ್ತಿಲ್ಲ ಎಂಬ ಆರೋಪದ ನಡುವೆಯೇ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕೋಟಿಗಟ್ಟಲೆ ಗೌರವಧನ ಬಿಡುಗಡೆ ಮಾಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಬೊಕ್ಕದ ಹಣವನ್ನ ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಗೌರವಧನ ಕೊಡಲು ಬಳಸುತ್ತಿದ್ದೀರಲ್ಲ? ಕನ್ನಡಿಗರ ತೆರಿಗೆ ಹಣ ಏನು ನಿಮ್ಮ ಕೆಪಿಸಿಸಿ ಆಸ್ತಿನಾ? ಎಂದು ಗುಡುಗಿದ್ದಾರೆ.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರ ಗೌರವಧನದ ನೆಪದಲ್ಲಿ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಅತ್ಯಾಪ್ತ ಕಾರ್ಯಕರ್ತರಿಗೆ ಒಟ್ಟು 18.75 ಕೋಟಿ ರೂಪಾಯಿ ಉಡುಗೊರೆ ಕೊಟ್ಟು ರಾಜ್ಯದ ಬೊಕ್ಕಸವನ್ನ ಲೂಟಿ ಮಾಡುತ್ತಿದೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ಎಂದು ದೂರಿದ್ದಾರೆ. ಇಷ್ಟಕ್ಕೂ ಈ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಯಾಕೆ ಬೇಕು? ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಆಯಾ ಇಲಾಖೆಯಲ್ಲಿ ಅಧಿಕಾರಿಗಳಿಲ್ಲವೇ? ಎಂದು ಕೇಳಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ಸಿಬ್ಬಂದಿಗಳಿಲ್ಲವೇ? ಅಥವಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಂದರೆ ಕಾಂಗ್ರೆಸ್ ಕಾರ್ಯಕರ್ತರ ಉದ್ಯೋಗ ಖಾತ್ರಿಗಾಗಿ ರೂಪಿಸಿರುವ ನರೇಗಾ ಯೋಜನೆನಾ? ಎಂದು ವ್ಯಂಗ್ಯವಾಡಿದ್ದಾರೆ. ಕರ್ನಾಟಕದ ಜನತೆಯ ಬೆವರಿನ ತೆರಿಗೆ ಹಣವನ್ನ ಈ ರೀತಿ ಪೋಲು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.
ಗೃಹಜ್ಯೋತಿಗೂ ಕನ್ನ: ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಗೃಹಲಕ್ಷ್ಮಿ ಹಣವನ್ನ ಫಲಾನುಭವಿಗಳ ಖಾತೆಗೆ ಹಾಕಲು ಅದೇನು ಸಂಬಳಾನಾ? ಅಂತ ಉಡಾಫೆ ಮಾತಾಡಿ ಮಹಿಳೆಯರ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಿದ್ದ ಇಂಧನ ಸಚಿವ ಕೆಜೆ ಜಾರ್ಜ್ ಅವರು ಈಗ ಗೃಹಜ್ಯೋತಿ ಗ್ಯಾರೆಂಟಿ ಯೋಜನೆ ಜಾರಿಯಲ್ಲಿ ಚೌಕಾಸಿ ಮಾಡುತ್ತಿದ್ದಾರೆ ಎಂದು ಆರ್.ಅಶೋಕ್ ದೂರಿದ್ದಾರೆ.
ಸಚಿವ ಕೆಜೆ ಜಾರ್ಜ್ ಅವರೇ, ಚುನಾವಣೆಗೂ ಮುನ್ನ ಎಲ್ಲರಿಗೂ 200 ಯುನಿಟ್ ಉಚಿತ ಅಂತ ಹೇಳಿ ಅಧಿಕಾರಕ್ಕೆ ಬಂದ ಮೇಲೆ, ವರ್ಷದ ಸರಾಸರಿ ಅಂತ ಟೋಪಿ ಹಾಕಿದ್ದೀರಿ. ಈಗ ಹೊಸದಾಗಿ ಮನೆ ಕಟ್ಟಿದವವರಿಗೆ, ಬಾಡಿಗೆ ಮನೆ ಬದಲಾಯಿಸಿದವರಿಗೆ ಗೃಹ ಯೋಜನೆಯ ಪೂರ್ಣ ಲಾಭ ಸಿಗುತ್ತಲೇ ಇಲ್ಲ. ಒಟ್ಟಿನಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ನಂಬಿಕೆ ದ್ರೋಹ ಮಾಡುತ್ತಲೇ ಇದೆ ಎಂದು ಆರೋಪ ಮಾಡಿದ್ದಾರೆ.
ಈಗ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ 36 ಸೀಟು ಕೂಡ ಬರಲ್ಲ
40 ಪರ್ಸೆಂಟ್ ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ. ನಿಮ್ಮ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಕಮಿಷನ್ ದಾಹ ಮಿತಿಮೀರಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ ಎಂದು ಅಶೋಕ್ ದೂರಿದ್ದಾರೆ.
ಜಿಎಸ್‌ಟಿ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ. ಈಗೇನು ಹೇಳುತ್ತೀರಿ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೀರಾ? ಸುಳ್ಳು, ಅಪಪ್ರಚಾರ, ಕುತಂತ್ರದಿಂದ 136 ಸೀಟು ಪಡೆದ ಕಾಂಗ್ರೆಸ್ ಪಕ್ಷ, ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದರೆ, 36 ಸೀಟ್ ಕೂಡ ಬರುವುದಿಲ್ಲ. ಇದು ನನ್ನ ಗ್ಯಾರೆಂಟಿ ಎಂದು ಸವಾಲು ಹಾಕಿದ್ದಾರೆ.

Post a Comment