ಮರಾವತಿ: ಆಂಧ್ರಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ, ವೇತನ ಸಹಿತ ಹೆರಿಗೆ ರಜೆ ಹಾಗೂ ನಿವೃತ್ತಿ ವಯಸ್ಸಿನ ಮಿತಿ ಹೆಚ್ಚಳ ಮಾಡಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒಪ್ಪಿಗೆ ನೀಡಿದ್ದಾರೆ.
ಅಲ್ಲದೆ, 30 ವರ್ಷ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು 1.50 ಲಕ್ಷ ರೂ.
ನಿವೃತ್ತಿ ಸೌಲಭ್ಯ ಪಡೆಯಲು ಅರ್ಹರು ಎಂದೂ ಘೋಷಿಸಲಾಗಿದೆ. ಆಶಾ ಕಾರ್ಯಕರ್ತೆಯರು ಜನ ಹಾಗೂ ಆರೋಗ್ಯ ವ್ಯವಸ್ಥೆಯ ನಡುವಿನ ಕೊಂಡಿ ಎಂದು ಬಣ್ಣಿಸಿದ್ದಾರೆ. 42,752 ಮಂದಿ ಆಶಾ ಕಾರ್ಯಕರ್ತೆಯರು ಈ ಸೌಲಭ್ಯವನ್ನು ಪಡೆಯಲಿದ್ದಾರೆ. ಜತೆಗೆ ಅರ್ಹ ಆಶಾ ಕಾರ್ಯಕರ್ತೆಯರು ಮೊದಲ 2 ಹೆರಿಗೆಗಳಿಗೆ 180 ದಿನಗಳ ವೇತನ ಸಹಿತ ರಜೆ ಪಡೆಯಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಘೋಷಿಸಿದರು.
ಬಹುಕಾಲದಿಂದ ಬಾಕಿ ಉಳಿದಿದ್ದ ಆಶಾ ಕಾರ್ಯಕರ್ತರ ಬೇಡಿಕೆಯ ಗುರುತಿಸಿದ ಸಿಎಂ ಚಂದ್ರಬಾಬು ನಾಯ್ಡು ಈ ಸೌಲಭ್ಯವನ್ನು ಅನುಮೋದಿಸಿ ಈ ರೀತಿಯ ಗ್ರಾಚ್ಯುಟಿ ಯೋಜನೆಯ ದೇಶದ ಬೇರೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಜಾರಿಗೆ ತಂದಿಲ್ಲ ಎಂದು ಹೇಳಿದರು.
42,752 ಆಶಾ ಕಾರ್ಯಕರ್ತರಿಗೆ ಅನುಕೂಲ:
ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತರಿಗೆ ಈಗ 180 ದಿನಗಳ ಹೆರಿಗೆ ರಜೆಯ ಕೆಲಸದ ದಿನಗಳೆಂದು ಪರಿಗಣಿಸಿದೆ. ಈ ಹಿಂದೆ, ಆಶಾ ಕಾರ್ಯಕರ್ತೆಯರು ಹೆರಿಗೆ ರಜೆಯ ಸಮಯದಲ್ಲಿ ಯಾವುದೇ ಸಂಬಳ ಪಡೆಯುತ್ತಿರಲಿಲ್ಲ, ಆದರೆ ಈ ಹೊಸ ನೀತಿಯಿಂದಾಗಿ ಹೆರಿಗೆ ರಜೆ ವೇಳೆಯೂ ಸಂಬಳಗಳಿಸಲು ಅರ್ಹ ರಾಗಿರುತ್ತಾರೆ. ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದಲ್ಲಿನ 37,017 ಮಂದಿ ಮತ್ತು ನಗರ ಪ್ರದೇಶದಲ್ಲಿನ 5,735 ಮಂದಿ ಆಶಾ ಕಾರ್ಯಕರ್ತರಿಗೆ ಪ್ರಯೋಜನವಾಗಲಿದೆ. ಈ ಘೋಷಣೆಯೊಂದಿಗೆ ಇತ್ತೀಚಿಗೆ ವಿಧಾನಸಭಾ ಚುನಾವಣೆ ವೇಳೆ ಆಶಾ ಕಾರ್ಯಕರ್ತರಿಗೆ ನೀಡಿದ್ದ ಭರವಸೆಯ ಈಡೇರಿಸಿದಂತಾಗಿದೆ.
ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ವೇತನ
ದೇಶದಲ್ಲಿನ ಇತರ ರಾಜ್ಯಗಳಿಗೆ ಹೋಲಿಸಿದರೆ ಆಶಾ ಕಾರ್ಯಕರ್ತರ ಮಾಸಿಕ ವೇತನವು ಆಂಧ್ರಪ್ರದೇಶದಲ್ಲಿ ಹೆಚ್ಚಿದೆ. ಇತರ ರಾಜ್ಯಗಳ ಪೈಕಿ ಉತ್ತರ ಪ್ರದೇಶ: ₹750, ಹಿಮಾಚಲ ಪ್ರದೇಶ: ₹2,000, ರಾಜಸ್ಥಾನ: ₹2,700, ಪಶ್ಚಿಮ ಬಂಗಾಳ ಮತ್ತು ದೆಹಲಿ: ₹3,000, ಹರಿಯಾಣ ಮತ್ತು ಕರ್ನಾಟಕ: ₹4,000, ಕೇರಳ: ₹5,000, ಸಿಕ್ಕಿಂ: ₹6,000, ತೆಲಂಗಾಣ: ₹7,500 ಪಡೆದರೆ, ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತರು ತಿಂಗಳಿಗೆ ₹10,000 ಪಡೆಯುತ್ತಿದ್ದು ಇದು ದೇಶದಲ್ಲೇ ಅತಿ ಹೆಚ್ಚು ಎಂದು ಸಿಎಂ ಹೇಳಿದರು.

Post a Comment