ಗಳೂರು: ಪೂರ್ವ, ಈಶಾನ್ಯ, ಆಗ್ನೇಯ ಹಾಗೂ ವೈಟ್‌ಫೀಲ್ಡ್ ವಿಭಾಗದ 75 ರೌಡಿಗಳ ಮನೆಗಳ ಮೇಲೆ ಸಿಸಿಬಿಯ ಸಂಘಟಿತ ಅಪರಾಧ ದಳದ ಪೊಲೀಸರು ದಾಳಿ ನಡೆಸಿ, ಶೋಧಿಸಿದ್ದಾರೆ.
15 ದಿನಗಳಿಂದ ನಿರಂತರವಾಗಿ ಈ ಕಾರ್ಯಾಚರಣೆ ನಡೆಯುತ್ತಿದೆ. ಗಡಿಪಾರು ಆದೇಶ ಉಲ್ಲಂಘಿಸಿ ನಗರದ ತಮ್ಮ ಮನೆಯಲ್ಲೇ ಏಳು ರೌಡಿಗಳು ವಾಸ ಮಾಡುತ್ತಿರುವುದು ಕಾರ್ಯಾಚರಣೆಯಲ್ಲಿ ಪತ್ತೆ ಆಯಿತು.
[ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಕೊಲೆ, ಕೊಲೆ ಯತ್ನ, ಸುಲಿಗೆ, ಕಳ್ಳತನ, ಗಲಾಟೆಯಲ್ಲಿ ಭಾಗಿಯಾದವರ ವಿರುದ್ಧ ವಿವಿಧ ಠಾಣೆಗಳಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ. ಕೆಲವು ರೌಡಿಗಳನ್ನು ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಅವರು ಗಡಿಪಾರು ಆದೇಶ ಉಲ್ಲಂಘಿಸಿ, ತಮ್ಮ ಮನೆಯಲ್ಲೇ ಇರುವುದು ದಾಳಿ ವೇಳೆ ಪತ್ತೆಯಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿ.ಜೆ. ಹಳ್ಳಿ, ಗಿರಿನಗರ, ಕೊಡಿಗೇಹಳ್ಳಿ, ಯಲಹಂಕ ನ್ಯೂಟೌನ್, ವಿಲ್ಸನ್ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ ವ್ಯಾಪ್ತಿಯ ರೌಡಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಲಾಯಿತು. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ ಶಾಂತಿ, ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸರು ಹೇಳಿದರು.

Post a Comment