ದಿನೇಶ್ ಗುಂಡೂರಾವ್ ವಿರುದ್ಧ ಕಿಡಿ
ಸಾವರ್ಕರ್ ಬಹಿರಂಗವಾಗಿಯೇ ಮಾಂಸಾಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಿದ್ದರು. ಹಾಗೆ ನೋಡಲು ಹೋದರೆ ಮಹಾತ್ಮ ಗಾಂಧಿ ಸಸ್ಯಾಹಾರಿ. ಅವರಿಗೆ ಹಿಂದೂ ಸಂಸ್ಕೃತಿ ಬಗ್ಗೆ ಅಪಾರವಾದ ಗೌರವ, ನಂಬಿಕೆ ಇತ್ತು. ಆದರೆ, ಅವರ ಅಭಿಪ್ರಾಯ ಬೇರೆ ರೀತಿಯಲ್ಲಿತ್ತು. ಅವರು ಡೆಮಾಕ್ರಟಿಕ್ ಆಗಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದರು.
ಬೆಂಗಳೂರು: ಸಾವರ್ಕರ್ (Vinayaka Damodar Savarkar) ಬಗ್ಗೆ ಆರೋಗ್ಯ ಸಚಿವ (Health Minister) ದಿನೇಶ್ ಗುಂಡೂರಾವ್ (Dinesh Gundu Rao) ನೀಡಿರುವ ಹೇಳಿಕೆ ಇದೀಗ ರಾಷ್ಟ್ರಮಟ್ಟದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಸಾವರ್ಕರ್ ಗೋಹತ್ಯೆಯ ವಿರೋಧಿಯಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರಾದರೂ (Chitpavan Brahmin) ಮಾಂಸಾಹಾರಿಯಾಗಿದ್ದರು, ಅವರು ಗೋಮಾಂಸ (Beef) ತಿನ್ನುತ್ತಿದ್ದರು ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಈ ಹೇಳಿಕೆಗೆ ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರು (BJP Leaders) ಕಿಡಿ ಕಾರಿದ್ದಾರೆ. ಇತ್ತ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಕೂಡ ದಿನೇಶ್ ಹೇಳಿಕೆಗೆ ಕಿಡಿಕಾರಿದ್ದಾರೆ.
ಸಾವರ್ಕರ್ ಬ್ರಾಹ್ಮಣ, ಹಾಗೆಂದು ಅವರು ಖಂಡಿತವಾಗಿಯೂ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಮೂಲಭೂತವಾದಿಯಾಗಿದ್ದರೂ ಮಾಡರ್ನ್ ಆಗಿದ್ದ ಅವರು ದನದ ಮಾಂಸ ಸೇವನೆ ಮಾಡುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ ಅಂತ ದಿನೇಶ್ ಗುಂಡೂರಾವ್ ಹೇಳಿದ್ದರು.
ಹಾಗೆ ನೋಡಿದ್ರೆ ಮಹಾತ್ಮಾ ಗಾಂಧಿ ಸಸ್ಯಾಹಾರಿ
ಸಾವರ್ಕರ್ ಬಹಿರಂಗವಾಗಿಯೇ ಮಾಂಸಾಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಿದ್ದರು. ಹಾಗೆ ನೋಡಲು ಹೋದರೆ ಮಹಾತ್ಮ ಗಾಂಧಿ ಸಸ್ಯಾಹಾರಿ. ಅವರಿಗೆ ಹಿಂದೂ ಸಂಸ್ಕೃತಿ ಬಗ್ಗೆ ಅಪಾರವಾದ ಗೌರವ, ನಂಬಿಕೆ ಇತ್ತು. ಆದರೆ, ಅವರ ಅಭಿಪ್ರಾಯ ಬೇರೆ ರೀತಿಯಲ್ಲಿತ್ತು. ಅವರು ಡೆಮಾಕ್ರಟಿಕ್ ಆಗಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದರು.
ಇದನ್ನೂ ಓದಿ: Savarkar Row: ಸಾವರ್ಕರ್ ಗೋಮಾಂಸ ತಿಂತಿದ್ದರು ಎಂದ ದಿನೇಶ್ ಗುಂಡೂರಾವ್, ಬ್ರಾಹ್ಮಣ ತಂದೆ ಹೇಳಿದ್ದೋ? ಮುಸ್ಲಿಂ ಪತ್ನಿ ಹೇಳಿದ್ದೋ? ಅಂತ ಬಿಜೆಪಿ ಕೆಂಡ
ಇತಿಹಾಸದ ಬಗ್ಗೆ ಅರಿಯದೇ ಮಾತನಾಡಬೇಡಿ
ದಿನೇಶ್ ಗುಂಡೂರಾವ್ ಹೇಳಿಕೆಗೆ ಕೇಂದ್ರ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹಾಗೂ ಇತಿಹಾಸದ ಬಗ್ಗೆ ಅರಿಯದೇ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿರುವುದು ಸರಿಯಲ್ಲ ಅಂತ ಸೋಮಣ್ಣ ಕಿಡಿಕಾರಿದ್ದಾರೆ.
ದಿನೇಶ್ ಗುಂಡೂರಾವ್ ಬಗ್ಗೆ ಅಪಾರ ಗೌರವವಿದೆ
ದಿನೇಶ್ ಗುಂಡೂರಾವ್ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಮಗನಾಗಿದ್ದು, ಅವರ ಬಗ್ಗೆ ಅಪಾರವಾದ ಗೌರವವಿದೆ. ಆದರೆ ಅವರು ಇತಿಹಾಸದ ಬಗ್ಗೆ ತಿಳಿದುಕೊಳ್ಳದೇ ಮಾತನಾಡುವುದು ಎಷ್ಟು ಸರಿ ಅಂತ ಸೋಮಣ್ಣ ಪ್ರಶ್ನಿಸಿದ್ರು. ದಿನೇಶ್ ಗುಂಡೂರಾವ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಅಂತ ಸೋಮಣ್ಣ ಹೇಳಿದ್ರು.
ದಿನೇಶ್ ವಿರುದ್ಧ ಬಿಜೆಪಿ ಆಕ್ರೋಶ
ಇನ್ನು ದಿನೇಶ್ ಗುಂಡೂರಾವ್ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ‘ದಿನೇಶ್ ಗುಂಡೂರಾವ್ ಅವರೇ, ಬ್ರಾಹ್ಮಣ ಸಮಾಜದ ವೀರ ಸಾವರ್ಕರ್ ಅವರು ಗೋಮಾಂಸ ಸೇವಿಸುತ್ತಿದ್ದರು ಎಂದು ನಿಮಗೆ ಬ್ರಾಹ್ಮಣ ಸಮಾಜದ ನಿಮ್ಮ ತಂದೆ ಗುಂಡೂರಾವ್ ಹೇಳಿದ್ದರೋ ಅಥವಾ ಮುಸ್ಲಿಂ ಸಮಾಜದ ನಿಮ್ಮ ಪತ್ನಿ ತಬಸ್ಸುಮ್ ಅವರು ಹೇಳಿದ್ದರೋ’ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ದೇವೇಂದ್ರ ಫಡ್ನವಿಸ್ ತಿರುಗೇಟು!
ದಿನೇಶ್ ಗುಂಡೂರಾವ್ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸುತ್ತಿದ್ದಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ತಿರುಗೇಟು ನೀಡಿದ್ದು, ‘ಸ್ವಾತಂತ್ರ್ಯ ಹೋರಾಟಗಾರನ ಪರಂಪರೆಯನ್ನು ಅರ್ಥ ಮಾಡಿಕೊಳ್ಳದೆ ಅವರನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ. ಈ ಜನರಿಗೆ (ಕಾಂಗ್ರೆಸ್) ಸಾವರ್ಕರ್ ಬಗ್ಗೆ ಏನೂ ತಿಳಿದಿಲ್ಲ. ಹೀಗಾಗಿ ಅವರನ್ನು ಅವಮಾನಿಸುತ್ತಲೇ ಇರುತ್ತಾರೆ ಎಂದು ಕಿಡಿಕಾರಿದ್ದಾರೆ.
ಸತ್ತು ಸ್ವರ್ಗದಲ್ಲಿರೋರನ್ನು ಬಿಡಿ
ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದು, ಹಿಂದೂಗಳನ್ನ ಟೀಕೆ ಮಾಡೋದೇ ಕಾಂಗ್ರೆಸ್ ಬ್ರ್ಯಾಂಡ್ ಆಗಿದೆ. ಹಿಂದೂಗಳಿಗೆ ಅವಹೇಳನ ಮಾಡುವಂತದ್ದು ಕಾಂಗ್ರೆಸ್ ಕೆಲಸ ಆಗಿದೆ. ಸಾವರ್ಕರ್ ಅವರನ್ನು ವಿಲನ್ ತರ ಮಾಡಿದ್ದಾರೆ. ಆದರೆ ಅವರು ಸ್ವಾತಂತ್ರ್ಯ ಹೋರಾಟಗಾರರು. ಅವರು ದನದ ಮಾಂಸ ತಿನ್ನುತ್ತಿದ್ದರು ಎಂದು ಹೇಳ್ತೀರಾ? ಅವರು ಸತ್ತು ಸ್ವರ್ಗದಲ್ಲಿ ಇದ್ದಾರೆ ಇನ್ನಾದರೂ ಬಿಡಿ ಅಂತ ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನವರಿಗೆ ಹಿಂದೂಗಳನ್ನು, ಕೇಸರಿ ಕಂಡರೆ ಆಗಲ್ಲ. ಬೊಟ್ಟು ಇಟ್ಟುಕೊಳ್ಳಬಾರದು, ನಾಮ ಇಟ್ಟುಕೊಳ್ಳಬಾರದು. ಹೆಣ್ಣುಮಕ್ಕಳು ಬಳೆ, ಕಾಲುಂಗುರ ಹಾಕಿಕೊಳ್ಳಬಾರದು ಎನ್ನುವ ಸ್ಥಿತಿಗೆ ಬಂದು ಬಿಡ್ತೀರ. ನಿಮ್ಮ ಮನಸ್ಥಿತಿಗಳನ್ನ ಬದಲಾವಣೆ ಮಾಡಿಕೊಳ್ಳಿ. ನಾವು ಹಿಂದುಗಳು, ನಿಮ್ಮನ್ನು ಹಿಂದು ಎಂದವರು ಯಾರು? ಟೀಕೆ ಮಾಡಲು ಹಿಂದು ಧರ್ಮ ಮಾತ್ರನಾ? ನಿಮಗೆ ಹಿಂದುಗಳೇ ಟಾರ್ಗೆಟ್ ಅಂತ ಅಶೋಕ್ ಸಿಡಿದಿದ್ದಾರೆ.

Post a Comment