Bulldozer Action: ದೇಗುಲ ಆಗಿರಲಿ, ದರ್ಗಾ ಆದ್ರೂ ಅಷ್ಟೇ ಅಕ್ರಮವಾಗಿ ಕಟ್ಟಿದ್ದರೆ ತೆರವುಗೊಳಿಸಲಾಗುವುದು; ಸುಪ್ರೀಂ ಕೋರ್ಟ್ ಖಡಕ್ ಹೇಳಿಕೆ


 ಸುಪ್ರೀಂ ಕೋರ್ಟ್

ದೇಶವಾಸಿಗಳ ಸುರಕ್ಷತೆ ದೃಷ್ಟಿಯಿಂದ ಧರ್ಮವನ್ನು ಲೆಕ್ಕಿಸದೆ ಬುಲ್ಡೋಜರ್ ಕ್ರಮ ಮತ್ತು ಅತಿಕ್ರಮಣ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯವು ಒತ್ತಿ ಹೇಳಿತು.

 ನವದೆಹಲಿ: ಅಕ್ರಮವಾಗಿ ಕಟ್ಟಿರುವ ಧಾರ್ಮಿಕ ಕಟ್ಟಡಗಳ ನೆಲಸಮದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ದೇಗುಲ ಆಗಿರಲಿ, ದರ್ಗಾ ಆದ್ರೂ ಅಷ್ಟೇ ಅಕ್ರಮವಾಗಿ ಕಟ್ಟಿದ್ದರೆ ತೆರವುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ರಸ್ತೆ, ಜಲ ಅಥವಾ ರೈಲು ಮಾರ್ಗವನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ಕಟ್ಟಿದ್ದರೆ ಅವುಗಳನ್ನು ಕೆವಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ದೇಶವಾಸಿಗಳ ಸುರಕ್ಷತೆ ದೃಷ್ಟಿಯಿಂದ ಧರ್ಮವನ್ನು ಲೆಕ್ಕಿಸದೆ ಬುಲ್ಡೋಜರ್ ಕ್ರಮ ಮತ್ತು ಅತಿಕ್ರಮಣ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯವು ಒತ್ತಿ ಹೇಳಿತು.

ಅಪರಾಧದ ಆರೋಪಿಗಳ ವಿರುದ್ಧ ಬುಲ್ಡೋಜರ್ ಕ್ರಮವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ವೇಳೆ ಉನ್ನತ ನ್ಯಾಯಾಲಯದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. “ಅದು ದೇವಸ್ಥಾನವಾಗಲಿ ಅಥವಾ ದರ್ಗಾವಾಗಲಿ ತೆರವುಗೊಳಿಸಲೇಬೇಕು. ಸಾರ್ವಜನಿಕ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ ” ಎಂದು ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ನೇತೃತ್ವದ ಪೀಠ ಹೇಳಿದೆ.

ಆರೋಪಿಗಳ ಮೇಲೆ ಬುಲ್ಡೋಜರ್ ಕ್ರಮವನ್ನು ಬಳಸುವ ರಾಜ್ಯದ ಅಧಿಕಾರಿಗಳು ಅಂತಹ ಪ್ರಕರಣಗಳಲ್ಲಿ ಅಕ್ರಮ ಕಟ್ಟಡಗಳನ್ನು ಮಾತ್ರ ಕೆಡವಲಾಗುತ್ತಿದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಷಯದಲ್ಲಿ ಮೂರು ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶವನ್ನು ಪ್ರತಿನಿಧಿಸಿದರು.

ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೆ ಎಲ್ಲರಿಗೂ ಒಂದೇ ಕಾನೂನು

“ನಮ್ಮದು ಜಾತ್ಯತೀತ ದೇಶ ಮತ್ತು ನಮ್ಮ ನಿರ್ದೇಶನಗಳು ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೆ ಎಲ್ಲರಿಗೂ ಒಂದೇ ಆಗಿರುತ್ತದೆ. ಸಹಜವಾಗಿ ಅತಿಕ್ರಮಣಕ್ಕಾಗಿ ನಾವು ಹೇಳಿದ್ದೇವೆ … ಅದು ಸಾರ್ವಜನಿಕ ರಸ್ತೆ, ಫುಟ್‌ಪಾತ್, ಜಲಮೂಲ ಅಥವಾ ರೈಲು ಮಾರ್ಗದ ಪ್ರದೇಶದಲ್ಲಿದ್ದರೆ ಅಕ್ರಮ ಕಟ್ಟಡವನ್ನು ತೆರವುಗೊಳಿಸಲೇಬೇಕು. ಸಾರ್ವಜನಿಕ ಸುರಕ್ಷತೆಯು ಅತಿಮುಖ್ಯ. ಗುರುದ್ವಾರ ಅಥವಾ ದರ್ಗಾ ಅಥವಾ ದೇವಸ್ಥಾನದ ಯಾವುದೇ ಧಾರ್ಮಿಕ ಕಟ್ಟಡಗಳು ರಸ್ತೆಯ ಮಧ್ಯದಲ್ಲಿ ಇದ್ದರೆ, ಅದು ಸಾರ್ವಜನಿಕರಿಗೆ ಅಡ್ಡಿಯಾಗುತ್ತೆ ಎಂದು ನ್ಯಾಯಾಲಯ ಹೇಳಿದೆ.

ಸೆಪ್ಟೆಂಬರ್ 17 ರಂದು, ಸುಪ್ರೀಂ ಕೋರ್ಟ್ ಪೀಠವು ತನ್ನ ಅನುಮತಿಯಿಲ್ಲದೆ ಅಕ್ಟೋಬರ್ 1 ರವರೆಗೆ ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ನೆಲಸಮ ಮಾಡಲಾಗುವುದಿಲ್ಲ ಎಂದು ಹೇಳಿತ್ತು.

Post a Comment

Previous Post Next Post