ಸನ್ನಡತೆ ಆಧಾರದಲ್ಲಿ ಪ್ರವೀಣ್‌ ಬಿಡುಗಡೆ ವಿಚಾರ: ಚರ್ಚಿಸಿ ತೀರ್ಮಾನ– ಆರಗ

[ಗೃಹ ಸಚಿವ ಆರಗ ಜ್ಞಾನೇಂದ್ರ


ಬೆಂಗಳೂರು: ‘ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವಾಮಂಜೂರಿನ ಪ್ರವೀಣ್‌ ಎಂಬಾತನನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡದಂತೆ ಪ್ರವೀಣ್‌ನ ಮನೆಯವರು ಆಗ್ರಹಿಸಿದ್ದಾರೆ. ಅಧಿಕಾರಿಗಳ ಜೊತೆ ಚರ್ಚಿಸಿ, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

[ ಪ್ರವೀಣ್‌ನನ್ನು ಯಾವುದೇ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದೆಂದು ಆಗ್ರಹಿಸಿ ಆತನ ಮನೆಯವರು ಗೃಹ ಸಚಿವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಆರಗ, ‘ಪ್ರವೀಣ್‌ ಜೈಲಿನಿಂದ ಹೊರಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಮನೆಯವರು ಹೇಳುತ್ತಿದ್ದಾರೆ. ಪ್ರವೀಣ್‌ನಿಗೆ 14 ವರ್ಷದ ಹಿಂದೆ ಶಿಕ್ಷೆ ಆಗಿತ್ತು. ಮೊದಲು ಗಲ್ಲು ಆಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಬದಲಾವಣೆ ಮಾಡಿತ್ತು. ರಾಷ್ಟ್ರಪತಿಯವರು ಕೂಡಾ ಅದನ್ನು ಎತ್ತಿ ಹಿಡಿದಿದ್ದರು. ಆತನ ಹಿನ್ನೆಲೆ ಈಗ ನಮಗೆ ಗೊತ್ತಾಗಿದೆ’ ಎಂದರು.

‘ಬೆಳಗಾವಿ ಜೈಲಿನಿಂದ ಕೋರ್ಟ್‌ಗೆ ಕರೆದುಕೊಂಡು ಹೋಗುವಾಗ ಈತ ಹಿಂದೆ ತಪ್ಪಿಸಿಕೊಂಡು ಹೋಗಿದ್ದ. ಗೋವಾದಲ್ಲಿ ಮದುವೆ, ಮಗು ಇದೆ ಎಂದು ಕುಟುಂಬವರು ಹೇಳುತ್ತಿದ್ದಾರೆ. ಹಳೆಯ ಸರ್ಕಾರಿ ಆದೇಶದಲ್ಲಿ 14 ವರ್ಷದ ಜೈಲು ಶಿಕ್ಷೆಯ ಬಳಿಕ ಸನ್ನಡತೆ ಆಧಾರದಲ್ಲಿ ಬಿಡುಗಡೆ್ ಮಾಡಲು ಅವಕಾಶವಿದೆ’ ಎಂದರು.

ಇದೊಂದು ವಿಶೇಷ ಪ್ರಕರಣ. ಈ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆದಿದ್ದೇನೆ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಕೊಲೆ, ಅತ್ಯಾಚಾರ ಮಾಡಿದ ಆರೋಪಿಗಳನ್ನು ಬಿಡುಗಡೆ ಮಾಡಬಾರದೆಂದು ಸಚಿವ ಸಂಪುಟ ಸಭೆಯಲ್ಲಿ ನಿಯಮ ಮಾಡಿದ್ದೇವೆ. ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಬಿಡುಗಡೆಗೆ ಅವಕಾಶ ಇಲ್ಲ. ಸರ್ಕಾರದ ಈ ಹಿಂದಿನ ಆದೇಶದ ಪ್ರಕಾರ ಈತನ ಬಿಡುಗಡೆಗೆ ಪ್ರಸ್ತಾವ ಬಂದಿದೆ‘ ಎಂದರು.
 

Post a Comment

Previous Post Next Post