ಸಿಂಧನೂರಿನಲ್ಲಿ ಯಶಸ್ವಿಯಾಗಿ ಜರುಗಿದ ಅವಿಸ್ಮರಣೀಯ ಸಾರ್ವಜನಿಕ ಕುರ್'ಆನ್ ಪ್ರವಚನ*


 *ಸಿಂಧನೂರಿನಲ್ಲಿ ಯಶಸ್ವಿಯಾಗಿ ಜರುಗಿದ ಅವಿಸ್ಮರಣೀಯ  ಸಾರ್ವಜನಿಕ ಕುರ್'ಆನ್ ಪ್ರವಚನ*


ಸಿಂಧನೂರಿನಲ್ಲಿ  3 ದಿನಗಳ _ಕನ್ನಡದಲ್ಲಿ ಸಾರ್ವಜನಿಕ ಕುರ್'ಆನ್  ಪ್ರವಚನ_ ದಿನಾಂಕ 26, 27 ಮತ್ತು 28 ಮೇ 2022ರಂದು ಇಲ್ಲಿನ ಆರ್. ಜಿ. ಎಮ್ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ಜರುಗಿತು. 3 ದಿನಗಳ ಕಾಲ ನಡೆದ ಈ ಕುರ್'ಆನ್ ಪ್ರವಚನ ಕಾರ್ಯಕ್ರಮದಲ್ಲಿ ಒಟ್ಟು  ಸುಮಾರು 20,000 ಜನರು ಭಾಗವಹಿಸಿದ್ದರು. ಖ್ಯಾತ ಪ್ರವಚನಕಾರರೂ ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿಯವರಾದ ಜನಾಬ್ ಮುಹಮ್ಮದ್ ಕುಂಞಯವರು  ಸುಭದ್ರ ಕುಟುಂಬ- ಸದೃಢ ಸಮಾಜ, ಮಾನವ ಘನತೆ ಮತ್ತು ಯಶಸ್ವಿ ಜೀವನ ಎಂಬ ವಿಷಯದಲ್ಲಿ ಕುರ್'ಆನ್ ಪ್ರವಚನವನ್ನು ನೀಡಿದರು.


*ಯೋಜನಾಬದ್ಧ, ಸುಸಂಘಟಿತ ಮಾದರಿ ಕಾರ್ಯಕ್ರಮ*

ಮೇ ತಿಂಗಳ 20,21,22ರಂದು ನಡೆಯಬೇಕಿದ್ದ ಪ್ರವಚನ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಒಂದು ವಾರ ಮುಂದೂಡಲ್ಪಟ್ಟಿದ್ದರೂ ಸಾರ್ವಜನಿಕರು ಅದೇ ಹುಮ್ಮಸ್ಸಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ಕುರ್'ಆನ್ ಪ್ರವಚನ ಕಾರ್ಯಕ್ರಮದ ಗೌರವಾಧ್ಯಕ್ಷರಾದ ಶಾಸಕ ಶ್ರೀ ವೆಂಕಟರಾವ್ ನಾಡಗೌಡ, ಕೊಪ್ಪಳ ಮಾಜಿ ಸಂಸದರಾದ ಶ್ರೀ ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ, ಸಿಂಧನೂರು ಪುರಸಭೆಯ ಮಾಜಿ ಅಧ್ಯಕ್ಷರಾದ ಸೈಯದ್ ಸಾದಿಕ್ ಹುಸೇನಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ, ಸಾರ್ವಜನಿಕ ಕುರ್'ಆನ್ ಪ್ರವಚನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶರಣೇಗೌಡ, ಕಾರ್ಯಾಧ್ಯಕ್ಷ  ಶ್ರೀ ಮಲ್ಲಿಕಾರ್ಜುನ ಗೌಡ ಹಾಗೂ ಸಂಚಾಲಕರಾದ ಜನಾಬ್ ಮುಹಮ್ಮದ್ ಹುಸೈನ್ ರವರ ಸಮರ್ಥ ಸಂಚಾಲಕತ್ವದಲ್ಲಿ  ವಿವಿಧ ಜಾತಿ- ಧರ್ಮದ ಮುಖಂಡರು, ಸಾಮಾಜಿಕ- ರಾಜಕೀಯ ಧುರೀಣರೊಳಗೊಂಡ ಸುಮಾರು 55 ಜನರ ಸ್ವಾಗತ ಸಮಿತಿಯವರ ಸಂಪೂರ್ಣ ಪರಿಶ್ರಮದಿಂದ, ನಗರದ ವಾರ್ತಾ ಮತ್ತು ದೃಶ್ಯ ಮಾಧ್ಯಮಗಳ ಬೆಂಬಲ ಹಾಗೂ ಸಮಸ್ತ ಸಿಂಧನೂರು ಜನತೆಯ ಸಹಕಾರದೊಂದಿಗೆ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸನ್ನು ಕಂಡಿತು. ಕಾರ್ಯಕ್ರಮದ ಪ್ರಯುಕ್ತ ಪ್ರವಚನಕಾರರಾದ ಜನಾಬ್ ಮುಹಮ್ಮದ್ ಕುಂಞಯವರಿಗೆ ನಗರಸಭೆಯ ಅಧ್ಯಕ್ಷರು, ಆಯುಕ್ತರು ಹಾಗೂ ನಗರಸಭೆಯ ಸದಸ್ಯರು ಸಿಂಧನೂರು ಜನತೆಯ ಪರವಾಗಿ 'ಪೌರ ಸಮ್ಮಾನ'ವನ್ನು ನೀಡಿದರು. ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ನಡೆದ ಬೃಹತ್ ಪುಸ್ತಕ ಮೇಳವು ಸಾರ್ವಜನಿಕರ ಗಮನ ಸೆಳೆಯಿತು.  

ಪ್ರವಚನ ಪೂರ್ವದಲ್ಲಿ ಸುಮಾರು ಒಂದು ತಿಂಗಳ ಕಾಲ ಸಿಂಧನೂರು ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉತ್ತಮ ರೀರಿಯಲ್ಲಿ ಪ್ರಚಾರವನ್ನು ನಡೆಸಲಾಗಿತ್ತು.  ವಿವಿಧ ಧರ್ಮೀಯ ಮುಖಂಡರುಗಳು ನಗರದ ವಿವಿಧ ವಾರ್ಡ್ ಗಳಲ್ಲಿ ನಡೆಸಿದ ಪಾದಯಾತ್ರೆಯು ಸಾರ್ವಜನಿಕರ ಮನಸೂರೆಗೊಂಡಿತು. ಒಟ್ಟಿನಲ್ಲಿ ಸರ್ವಧರ್ಮೀಯರ ಸಹಭಾಗಿತ್ವದಲ್ಲಿ ಜರುಗಿದ ಸಾರ್ವಜನಿಕ ಕಾರ್ಯಕ್ರಮ ಇದಾಗಿತ್ತು.


*ಪರಿಸರದ ಮಠಾಧೀಶರ ಹೃತ್ಪೂರ್ವಕ ಬೆಂಬಲ*

ಸಿಂಧನೂರು ಹಾಗೂ ಸುತ್ತಮುತ್ತಲಿನ ಪರಿಸರದ ಗೌರವಾನ್ವಿತ ಮಠಾಧೀಶರುಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ಸಿದ್ದಲಿಂಗ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಸಿದ್ದರಾಮೇಶ್ವರ ಶರಣರು, ಶ್ರೀ ನಂಜುಂಡಯ್ಯ ಗುರುಗಳು, ಶ್ರೀ ಚಿದಾನಂದಯ್ಯ ಗುರುಗಳು ಇವರೆಲ್ಲ ಹೃತ್ಪೂರ್ವಕ ಬೆಂಬಲ, ಸಹಕಾರ, ಮಾರ್ಗದರ್ಶನವು ಎಂದೆಂದಿಗೂ ಸ್ಮರಣೀಯ. ಅದೇ ರೀತಿ ಎಲ್ಲಾ ಜಾತಿ- ಸಮುದಾಯಗಳ ನಾಯಕರ ಸಹಕಾರವು ಅಭಿನಂದನಾರ್ಹ.


*ಯಶಸ್ಸಿಗಾಗಿ ಆಹೋರಾತ್ರಿ ಶ್ರಮಿಸಿದ ಜಮಾಅತ್, ಸಾಲಿಡಾರಿಟಿ ಜಿ.ಐ.ಓ., ಎಸ್.ಐ.ಓ. ಹಾಗೂ ಮಹಿಳಾ ಕಾರ್ಯಕರ್ತರು*

ಕುರ್'ಆನ್ ಪ್ರವಚನ ಕಾರ್ಯಕ್ರಮದ ಯಶಸ್ಸಿಗಾಗಿ ಜಮಾಅತ್ ಪರಿವಾರದ ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಮಹಿಳಾ ಕಾರ್ಯಕರ್ತರ ಶ್ರಮ ಅಭೂತಪೂರ್ವವಾದದ್ದು. ಸುಮಾರು ಒಂದುವರೆ ತಿಂಗಳ ಕಾಲ ಹಗಲಿರುಳೆನ್ನದೆ ಮನೆ-ಮನೆಗೆ ಭೇಟಿ ನೀಡಿ ಕುರ್'ಆನ್ ಪ್ರವಚನ ಕಾರ್ಯಕ್ರಮದ ಪ್ರಚಾರ ನಡೆಸಿದ್ದರು.

ಕಾರ್ಯಕ್ರಮದ ಯಸಸ್ಸಿಗಾಗಿ ದುಡಿದ, ತನು ಮನ ಧನದಿಂದ ಸಹಕರಿಸಿದ ಸರ್ವರಿಗೂ ಸರ್ವಶಕ್ತನಾದ ಅಲ್ಲಾಹನು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ.

Post a Comment

Previous Post Next Post